ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರಿನ ಮಹಾಪೂರ: ಸಮಸ್ಯೆಗೆ ಸ್ಪಂದನೆ

ಜಿಲ್ಲಾಧಿಕಾರಿ ಫೋನ್‌–ಇನ್ ಕಾರ್ಯಕ್ರಮ: ಕೊರೊನಾ ಸೋಂಕಿನ ವಿಷಯ ಪ್ರಸ್ತಾಪ
Last Updated 3 ಏಪ್ರಿಲ್ 2020, 14:50 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳ ಫೋನ್‌–ಇನ್ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಬಂಧ ದೂರುಗಳ ಮಹಾಪೂರವೇ ಹರಿದುಬಂದಿತು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ಫೋನ್‌ಇನ್‌ ಕಾರ್ಯಕ್ರಮವು ಮಧ್ಯಾಹ್ನ 1.30ರವರೆಗೆ ನಡೆಯಿತು. ಸತತ ಎರಡೂವರೆ ತಾಸು ಕರೆಗಳು ರಿಂಗಣಿಸಿದವು. ಜಿಲ್ಲೆಯ ಮೂಲೆ ಮೂಲೆಯಿಂದ ಸಾರ್ವಜನಿಕರು ಕರೆ ಮಾಡಿ ಸಮಸ್ಯೆ ಹಂಚಿಕೊಂಡರು. ಕರೆ ಮಾಡಿದ ಬಹುಪಾಲು ಮಂದಿ ಕುಡಿಯುವ ನೀರು ಹಾಗೂ ಕೊರೊನಾ ಸೋಂಕಿನ ವಿಷಯ ಪ್ರಸ್ತಾಪಿಸಿದರು.

ಬಿಡುವಿಲ್ಲದೆ ಕರೆ ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ‘ನೀರಿನ ಸಮಸ್ಯಾತ್ಮಕ ವಾರ್ಡ್‌ ಹಾಗೂ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಮೂರ್ನಾಲ್ಕು ದಿನದಲ್ಲಿ ಸಮಸ್ಯೆ ಪರಿಹರಿಸುತ್ತೇವೆ. ಸಮಸ್ಯಾತ್ಮಕ ಗ್ರಾಮಗಳು ಹಾಗೂ ವಾರ್ಡ್‌ಗಳಿಗೆ ಟ್ಯಾಂಕರ್‌ ಮತ್ತು ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಕೊರೊನಾ ಸೋಂಕಿನ ತಡೆಗಾಗಿ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳ ವತಿಯಿಂದ ಕ್ರಿಮಿನಾಶಕ ಸಿಂಪಡಣೆ ಮಾಡಿಸಲಾಗುತ್ತಿದೆ. ಜತಗೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲರೂ ಮುಖಗವಸು ಧರಿಸುವ ಅಗತ್ಯವಿಲ್ಲ. ವೈದ್ಯಕೀಯ ಸಿಬ್ಬಂದಿ ಹಾಗೂ ಕೊರೊನಾ ಸೋಂಕಿನ ಲಕ್ಷಣ ಇರುವವರು ಮಾತ್ರ ಮುಖಗವಸು ಧರಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9 ಗಂಟೆಗೆ ಮನೆಗಳಲ್ಲಿ ದೀಪ, ಮೊಂಬತ್ತಿ, ಟಾರ್ಚ್ ಅಥವಾ ಮೊಬೈಲ್‌ ಟಾರ್ಚ್‌ ಬೆಳಗಿಸುವಂತೆ ಕರೆ ನೀಡಿದ್ದು, ಎಲ್ಲರೂ ಒಗ್ಗಟ್ಟಾಗಿ ಇದನ್ನು ಪಾಲಿಸೋಣ’ ಎಂದು ಹೇಳಿದರು.

ವದಂತಿಗೆ ಕಿವಿಗೂಡಬೇಡಿ: ‘ಮೈಸೂರಿನಿಂದ ಕೋಲಾರ ಜಿಲ್ಲೆಗೆ ಕೋಳಿ ಮೊಟ್ಟೆ ಸರಬರಾಜಾಗುತ್ತಿವೆ. ಕೋಳಿ ಮೊಟ್ಟೆ ಸೇವನೆಯಿಂದ ಕೊರೊನಾ ಸೋಂಕು ಹರಡುವುದಿಲ್ಲ. ಈ ಬಗ್ಗೆ ಆತಂಕ ಬೇಡ. ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿ ಅಥವಾ ಮಾರುಕಟ್ಟೆಗಳಿಗೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಕೆಲವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವದಂತಿ ಹಬ್ಬಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಜನರು ವದಂತಿಗೆ ಕಿವಿಗೂಡದೆ ಧೈರ್ಯದಿಂದಿರಬೇಕು. ದಿಗ್ಬಂಧನದ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ ಮನೆಗಳಲ್ಲಿ ಇದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪಡಿತರ ಪಡೆಯಲು ಪಡಿತರದಾರರು ಬೆರಳಚ್ಚು ಮಾದರಿ (ಥಂಬ್‌) ಕೊಡುವ ಅಗತ್ಯವಿಲ್ಲ’ ಎಂದರು.

‘ಪಡಿತರದಾರರು ತಮ್ಮ ಮೊಬೈಲ್‌ಗೆ ಬಂದಿರುವ ಓಟಿಪಿ ವಿವರ ತೋರಿಸಿ ಪಡಿತರ ಪಡೆಯಬಹುದು. ಮೊಬೈಲ್ ಸಂಖ್ಯೆ ಬದಲಾವಣೆ ಆಗಿರುವವರ ಮೊಬೈಲ್‌ಗೆ ಓಟಿಪಿ ಬರುವುದಿಲ್ಲ. ಆದರೂ ಅವರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಆಂಬುಲೆನ್ಸ್‌ ವ್ಯವಸ್ಥೆ: ‘ದಿಗ್ಬಂಧನ ಆದೇಶದಿಂದಾಗಿ ಆಟೊ ಸೇವೆ ಸ್ಥಗಿತಗೊಂಡಿದ್ದು. ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಮಹಿಳೆಯೊಬ್ಬರೂ ಅಳಲು ತೋಡಿಕೊಂಡರು. ಈ ಮಹಿಳೆಯ ವಿಳಾಸ ಪಡೆದ ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿ ಆಂಬುಲೆನ್ಸ್‌ನ ವ್ಯವಸ್ಥೆ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್‌ರೆಡ್ಡಿ, ಮಹಮ್ಮದ್‌ ಸುಜಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕ ನಾಗರಾಜ್ ಕೆಳಗಿನಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT