ರಾಗಿ ಬೆಳೆ ನಷ್ಟದ ಸರ್ವೆಗೆ ಸೂಚನೆ

7

ರಾಗಿ ಬೆಳೆ ನಷ್ಟದ ಸರ್ವೆಗೆ ಸೂಚನೆ

Published:
Updated:
Prajavani

ಕೋಲಾರ: ‘ಕೃಷಿ ಇಲಾಖೆ ಅಧಿಕಾರಿಗಳು ರಾಗಿ ಬೆಳೆ ನಷ್ಟದ ಸರ್ವೆ ನಡೆಸಿ 5 ದಿನದೊಳಗೆ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಬರ ಪರಿಸ್ಥಿತಿ ನಿರ್ವಹಣೆ ಕುರಿತು ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಈ ಹಿಂದೆ ಬೆಳೆ ನಷ್ಟ ಸಮೀಕ್ಷೆ ನಡೆಸಲಾಗಿದೆ. ಆದರೆ, ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲವೆಂದು ದೂರು ಬಂದಿವೆ. ಆದ ಕಾರಣ ಶೀಘ್ರವೇ ಸರ್ವೆ ಪ್ರಕ್ರಿಯೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಬೆಳೆ ನಷ್ಟ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು 9,637 ಹೆಕ್ಟೇರ್‌ ಪ್ರದೇಶದಲ್ಲಿನ ರಾಗಿ ಬೆಳೆಯ ಜಂಟಿ ಸರ್ವೆ ನಡೆಸಬೇಕು. ಇದಕ್ಕೆ 510 ಹಳ್ಳಿಗಳು ಒಳಪಡಲಿದ್ದು, ಗ್ರಾಮ ಲೆಕ್ಕಾಧಿಕಾರಿಗಳ ಸಹಾಯ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ 4 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಉಳಿದ 6 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ ಮಾಲೀಕರು ಹಾಗೂ ಖಾಸಗಿ ಕೊಳವೆ ಬಾವಿಗಳ ಮಾಲೀಕರು ಸಕಾಲಕ್ಕೆ ಬಿಲ್‌ ಸಲ್ಲಿಸಿದರೆ ಹಣ ಬಿಡುಗಡೆ ಮಾಡಲಾಗುತ್ತದೆ. ಎಂಜಿನಿಯರ್‌ ಮತ್ತು ಕಾರ್ಯ ನಿರ್ವಹಣಾಧಿಕಾರಿಗಳು ಬಿಲ್ ಸಲ್ಲಿಕೆ ಬಗ್ಗೆ ಗಮನ ಹರಿಸಬೇಕು’ ಎಂದರು.

‘ಸದ್ಯಕ್ಕೆ ಜಿಲ್ಲೆಗೆ 12 ಸಾವಿರ ಮೇವಿನ ಕಿಟ್‌ ಸರಬರಾಜಾಗುತ್ತಿದ್ದು, 6 ತಾಲ್ಲೂಕುಗಳಿಗೆ ತಲಾ 2 ಸಾವಿರ ವಿತರಿಸಬೇಕು. ಮೇವು ಬೆಳೆದು ಹೊರ ರಾಜ್ಯದವರಿಗೆ ಮಾರಾಟ ಮಾಡುವ ರೈತರಿಗೆ ವಿತರಿಸಬಾರದು. ಕಿಟ್ ಪಡೆದು ಮೇವು ಬೆಳೆದ ರೈತರು ಸ್ಥಳೀಯ ರೈತರಿಗೆ ಮಾರಾಟ ಮಾಡಬೇಕು. ಹೊರಗಿನವರಿಗೆ ಮೇವು ಮಾರಾಟ ಮಾಡಿದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘10 ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿರುವುದಕ್ಕೆ ಸಂಬಂಧಪಟ್ಟಂತೆ 15 ದಿನಕ್ಕೊಮ್ಮೆ ಬಿಲ್ ನೀಡಬೇಕು. ತಡ ಮಾಡಿದರೆ ಹಣ ಪಾವತಿಸುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !