ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ಗೆ ₹ 11.50 ಕೋಟಿ ಲಾಭ

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ
Last Updated 4 ಏಪ್ರಿಲ್ 2019, 15:45 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್ ಹಿಂದಿನ ಹಣಕಾಸು ವರ್ಷದಲ್ಲಿ ₹ 1,112 ಕೋಟಿ ವಹಿವಾಟು ನಡೆಸಿ ₹ 11.50 ಕೋಟಿ ಲಾಭ ಗಳಿಸಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬ್ಯಾಂಕ್ ಬಡವರು ಮತ್ತು ಮಹಿಳೆಯರಿಗೆ ಹೆಚ್ಚಿನ ಸಾಲ ನೀಡಿದೆ. ಸಾಲ ಪಡೆದವರಲ್ಲಿ ಶೇ 98ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿರುವವರು’ ಎಂದರು.

‘ಬ್ಯಾಂಕ್‌ನ ಹಾಲಿ ನಿರ್ದೇಶಕ ಅನಿಲ್‌ಕುಮಾರ್ ಈ ಹಿಂದೆ ಎಂಎಸ್‍ಐಎಲ್ ಅಧ್ಯಕ್ಷರಾಗಿದ್ದಾಗ, ಆ ಸಂಸ್ಥೆಯ ಠೇವಣಿ ಮತ್ತು ವಹಿವಾಟನ್ನು ಡಿಸಿಸಿ ಬ್ಯಾಂಕ್ ಮೂಲಕ ನಡೆಸುವಂತೆ ಸೂಚಿಸಿದ್ದರು. ಆದರೆ, ಎಂಎಸ್‌ಐಎಲ್‌ ಅಧಿಕಾರಿಗಳು ಬ್ಯಾಂಕ್ ಕ್ರೋಢೀಕೃತ ನಷ್ಟದಲ್ಲಿರುವುದರಿಂದ ವಹಿವಾಟು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು. ಅನಿಲ್‌ಕುಮಾರ್‌ ಬ್ಯಾಂಕ್‌ನ ನೆರವಿಗೆ ಬಂದರೂ ನಿಯಮ ಅಡ್ಡಿಯಾಗಿತ್ತು. ಆದರೆ, ಈಗ ಬ್ಯಾಂಕ್‌ ಕ್ರೋಢೀಕೃತ ನಷ್ಟ ತುಂಬಿ ಲಾಭದಲ್ಲಿದೆ’ ಎಂದು ವಿವರಿಸಿದರು.

‘ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿರುವ ರೈತರು ಮತ್ತು ಮಹಿಳೆಯರೇ ಬ್ಯಾಂಕ್‌ನ ಶಕ್ತಿ. 2014ರ ಮಾರ್ಚ್‌ನಲ್ಲಿ ₹ 47.79 ಕೋಟಿಯಿದ್ದ ಬ್ಯಾಂಕ್‌ನ ಠೇವಣಿ ಈಗ ₹ 277.51 ಕೋಟಿಗೆ ಏರಿದೆ. ₹ 16.90 ಕೋಟಿ ಕ್ರೋಢಿಕೃತ ನಷ್ಟ ಹೋಗಲಾಡಿಸಲಾಗಿದ್ದು, ಲಾಭದಲ್ಲಿರುವ ದೇಶದ ಏಕೈಕ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಮಾಹಿತಿ ನೀಡಿದರು.

ದೊಡ್ಡ ಇತಿಹಾಸ: ‘2013ರ ಮಾರ್ಚ್‌ನಲ್ಲಿ ಬ್ಯಾಂಕ್‌ನ ನಿಷ್ಕ್ರಿಯ ಆಸ್ತಿ ಮೌಲ್ಯ (ಎನ್‌ಪಿಎ) ಶೇ 62.9ರಷ್ಟಿತ್ತು. ಈ ಪ್ರಮಾಣ 2019ರ ಮಾರ್ಚ್‌ ಅಂತ್ಯಕ್ಕೆ ಶೇ 3.2ಕ್ಕೆ ಇಳಿದಿದೆ. ಇದು ಸಹಕಾರಿ ಬ್ಯಾಂಕಿಂಗ್ ರಂಗದಲ್ಲೇ ದೊಡ್ಡ ಇತಿಹಾಸ’ ಎಂದು ಸಂತಸ ವ್ಯಕ್ತಪಡಿಸಿದರು.

‘ಬ್ಯಾಂಕ್‌ನ ಷೇರು ಬಂಡವಾಳ ₹ 13.67 ಕೋಟಿಯಿಂದ ₹ 73.17 ಕೋಟಿಗೇರಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬ್ಯಾಂಕ್‌ನ 12 ಶಾಖೆಗಳಿವೆ ಹಾಗೂ 1 ವಿಸ್ತರಣಾ ಕೌಂಟರ್ ಇದೆ. 1954ರಲ್ಲಿ ಆರಂಭವಾದ ಬ್ಯಾಂಕ್ ಅವಳಿ ಜಿಲ್ಲೆಯ 12 ತಾಲ್ಲೂಕುಗಳ 2,925 ಗ್ರಾಮಗಳಲ್ಲಿ ವ್ಯಾಪಿಸಿದೆ’ ಎಂದು ಮಾಹಿತಿ ನೀಡಿದರು.

ಶಾಖೆ ಹೆಚ್ಚಳ: ‘ಹೊಸ ಆಡಳಿತ ಮಂಡಳಿಯು ಬ್ಯಾಂಕ್‌ನ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹಣಕಾಸು ವ್ಯವಹಾರ ಸರಳಗೊಳಿಸಿ ಕೃಷಿ ಹಾಗೂ ಸ್ವಾವಲಂಬಿ ಚಟುವಟಿಕೆಗಳಿಗೆ ಸಾಲ ನೀಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಸಿ ಬ್ಯಾಂಕ್ 100 ಶಾಖೆ ಹೊಂದಿದೆ. ನಮ್ಮ ಬ್ಯಾಂಕ್‌ನ ಶಾಖೆ ಹೆಚ್ಚಿಸಲು ಅನುಮತಿ ಪಡೆದಿದ್ದು, ನಿರ್ದೇಶಕರು ಸೂಚಿಸುವ ಕಡೆ ಶಾಖೆ ಆರಂಭಿಸಲಾಗುತ್ತದೆ’ ಎಂದರು.

ಬ್ಯಾಂಕ್‌ನ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಅನಿಲ್‌ಕುಮಾರ್‌, ಸೋಮಣ್ಣ, ಹನುಮಂತರೆಡ್ಡಿ, ಕೆ.ವಿ.ದಯಾನಂದ್, ನಾರಾಯಣರೆಡ್ಡಿ, ಮೋಹನ್‌ರೆಡ್ಡಿ, ನಾಗಿರೆಡ್ಡಿ, ದ್ಯಾವಪ್ಪ, ವೆಂಕಟರೆಡ್ಡಿ, ಗೋವಿಂದರಾಜು ಹಾಜರಿದ್ದರು.

ಅಂಕಿ ಅಂಶ.....
* ₹ 1,112 ಕೋಟಿ ವಾರ್ಷಿಕ ವಹಿವಾಟು
* ₹ 277.51 ಕೋಟಿಗೆ ಏರಿದ ಠೇವಣಿ
* ಶೇ 3.2ಕ್ಕೆ ಇಳಿದ ಎನ್‌ಪಿಎ
* ₹ 73.17 ಕೋಟಿ ಷೇರು ಬಂಡವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT