ಮಂಗಳವಾರ, ಅಕ್ಟೋಬರ್ 15, 2019
29 °C
ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ

ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಸಶಕ್ತ

Published:
Updated:
Prajavani

ಕೋಲಾರ: ‘ರಾಜ್ಯದಲ್ಲೇ ಮಹಿಳೆಯರಿಗೆ ಅತಿ ಹೆಚ್ಚು ಸಾಲ ನೀಡಿದ ಹೆಗ್ಗಳಿಕೆ ಕೋಲಾರ ಡಿಸಿಸಿ ಬ್ಯಾಂಕಿನದು. ಈ ಹಿಂದೆ ಬ್ಯಾಂಕ್‌ನ ಹೆಸರೇಳಿದರೆ ಅನುಮಾನದಿಂದ ನೋಡುತ್ತಿದ್ದವರು ಈಗ ಬ್ಯಾಂಕ್‌ನತ್ತ ನಂಬಿಕೆಯಿಂದ ಬರುತ್ತಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಡಿಸಿಸಿ ಬ್ಯಾಂಕ್‌ ತಾಲ್ಲೂಕಿನ ವಕ್ಕಲೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಾಲ ವಿತರಿಸಿ ಮಾತನಾಡಿ, ‘ಹೊಸ ಆಡಳಿತ ಮಂಡಳಿಯು ಬ್ಯಾಂಕ್ ಉಳಿಸಲು ಹಗಲಿರುಳು ಶ್ರಮಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆರ್ಥಿಕವಾಗಿ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಚೇತರಿಸಿಕೊಂಡು ಸಶಕ್ತವಾಗಿದೆ. ಇದರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳೆಯರು, ರೈತರಿಗೆ ಕೋಟ್ಯಂತರ ರೂಪಾಯಿ ಸಾಲದ ನೆರವು ಸಿಕ್ಕಿದೆ. ಸಾಲ ಪಡೆದವರು ಪ್ರಾಮಾಣಿಕವಾಗಿ ಹಿಂದಿರುಗಿಸಿ ಬ್ಯಾಂಕ್‌ ಉಳಿಸಬೇಕು’ ಎಂದು ಸಲಹೆ ನೀಡಿದರು.

‘ಮಹಿಳೆಯರು ನಂಬಿಕೆ ಉಳಿಸಿಕೊಂಡಿದ್ದಾರೆ. ಗೌರವಕ್ಕೆ ಚ್ಯುತಿ ಬಾರದಂತೆ ಸಕಾಲಕ್ಕೆ ಸಾಲ ಮರು ಪಾವತಿ ಮಾಡುತ್ತಿರುವ ಮಹಿಳೆಯರೇ ಬ್ಯಾಂಕ್‌ನ ಆಧಾರಸ್ತಂಭ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಸಾಲ ಮಿತಿ ಏರಿಕೆ: ‘ವಕ್ಕಲೇರಿ ಹೋಬಳಿಯಲ್ಲಿ ಕನಿಷ್ಠ 25 ಸಾವಿರ ಮಂದಿಗೆ ಸಾಲ ನೀಡಲು ನಿರ್ಧರಿಸಿದ್ದೇವೆ. ಮಹಿಳೆಯರು ಮೊದಲು ತೆಗೆದುಕೊಂಡ ಸಾಲ ಹಿಂದಿರುಗಿಸಿದರೆ ಮತ್ತೆ ₹ 1 ಲಕ್ಷದವರೆಗೆ ಸಾಲ ನೀಡುತ್ತೇವೆ. ಈ ಹಿಂದ ಶೂನ್ಯ ಬಡ್ಡಿ ಸಾಲದ ಮಿತಿ ₹ 50 ಸಾವಿರವಿತ್ತು. ಸಿದ್ದರಾಮಯ್ಯ ಮತ್ತು ಹಿಂದಿನ ಸಮ್ಮಿಶ್ರ ಸರ್ಕಾರವು ಸಾಲ ಮಿತಿಯನ್ನು ₹ 1 ಲಕ್ಷಕ್ಕೆ ಏರಿಸಿದೆ’ ಎಂದು ವಿವರಿಸಿದರು.

‘ಮಹಿಳೆಯರು ಜೀವನೋಪಾಯಕ್ಕಾಗಿ ಹಸು ಖರೀದಿಸಿ ವಿಮೆ ಮಾಡಿಸಿದರೆ ₹ 50 ಸಾವಿರ ಶೂನ್ಯ ಬಡ್ಡಿ ಸಾಲ ಹಾಗೂ ಶೇ 3ರ ಬಡ್ಡಿ ದರದಲ್ಲಿ ₹ 50 ಸಾವಿರ ಸಾಲ ನೀಡಲಾಗುತ್ತದೆ. ಇದಕ್ಕೆ ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅದನ್ನು ನಿವಾರಣೆ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

‘ಬಡ್ಡಿ ದಂಧೆಕೋರರು ಬಡವರ ರಕ್ತ ಹೀರಿ ಸಾಲ ವಸೂಲಿ ಮಾಡುತ್ತಾರೆ. ಅವರ ಶೋಷಣೆಯಿಂದ ತಪ್ಪಿಸಲು ಡಿಸಿಸಿ ಬ್ಯಾಂಕ್ ಶಕ್ತಿ ಮೀರಿ ಶ್ರಮಿಸುತ್ತಿದೆ. ಮಹಿಳೆಯರು ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು, ಮತ್ತಷ್ಟು ಮಂದಿಗೆ ಸಾಲ ಕೊಡಲು ನೆರವಾಗಬೇಕು’ ಎಂದು ಮನವಿ ಮಾಡಿದರು.

ಸೊಸೈಟಿ ವಿಲೀನ: ‘ಸೊಸೈಟಿಯು ಈ ಹಿಂದೆ ಕೆನರಾ ಬ್ಯಾಂಕ್ ಅಧೀನದಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿತ್ತು. ಆಗ ನಿರೀಕ್ಷಿತ ಮಟ್ಟದಲ್ಲಿ ಸಾಲ ದೊರೆಯುತ್ತಿರಲಿಲ್ಲ. ಹೀಗಾಗಿ ಸೊಸೈಟಿಯನ್ನು ಡಿಸಿಸಿ ಬ್ಯಾಂಕ್‌ನ ಜತೆ ವಿಲೀನ ಮಾಡಲಾಯಿತು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ವಿವರಿಸಿದರು.

‘ತಾಲ್ಲೂಕಿನಲ್ಲಿ 1 ಲಕ್ಷ ಮಹಿಳೆಯರಿಗೆ ಸಾಲ ನೀಡುವ ಗುರಿಯಿದ್ದು, ಈ ಯೋಜನೆಯನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಲಾಗಿದೆ. ಸೊಸೈಟಿಗಳ ಜವಾಬ್ದಾರಿ ಹೆಚ್ಚಿದ್ದು, ಬದ್ಧತೆಯಿಂದ ಕೆಲಸ ಮಾಡಬೇಕು. ಹೆಣ್ಣಿಗೆ ಅರ್ಥಿಕ ಶಕ್ತಿ ನೀಡಿದರೆ ಮಹಿಳಾ ಸಬಲೀಕರಣದ ಜತೆಗೆ ಇಡೀ ಕುಟುಂಬ ನೆಮ್ಮದಿಯಿಂದ ಇರಲು ಸಹಾಯವಾಗುತ್ತದೆ’ ಎಂದು ಸಲಹೆ ನೀಡಿದರು.

114 ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ  ₹ 1.19 ಕೋಟಿ ಸಾಲ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ಪಾಲಕ್ಷಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ವಕ್ಕಲೇರಿ ಎಸ್‍ಎಫ್‌ಸಿಎಸ್‌ ಅಧ್ಯಕ್ಷೆ ಯಶೋಧಮ್ಮ, ಟಿಎಪಿಸಿಎಂಸ್ ನಿರ್ದೇಶಕ ಚಂದ್ರೇಗೌಡ, ಕಾರ್ಯದರ್ಶಿ ಮಂಜುನಾಥ್ ಹಾಜರಿದ್ದರು.

Post Comments (+)