ಬುಧವಾರ, ಜೂನ್ 16, 2021
21 °C

ಡಿಸಿಸಿ ಬ್ಯಾಂಕ್‌ ರಾಜ್ಯಕ್ಕೆ ಮಾದರಿ: ಶಾಸಕ ಶ್ರೀನಿವಾಸಗೌಡ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್‌ ಆರ್ಥಿಕವಾಗಿ ಚೇತರಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿ ರಾಜ್ಯದಲ್ಲೇ ಮಾದರಿ ಬ್ಯಾಂಕ್‌ ಆಗಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ (ಎಸ್‌ಎಫ್‌ಸಿಎಸ್‌) ಮತ್ತು ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ ವಕ್ಕಲೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 44 ಮಹಿಳಾ ಸಂಘಗಳ ಸದಸ್ಯರಿಗೆ ₹ 2.15 ಕೋಟಿ ಸಾಲ ವಿತರಿಸಿ ಮಾತನಾಡಿದರು.

‘ಆಡಳಿತ ಮಂಡಳಿಯು ಬ್ಯಾಂಕ್‌ನ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡಿದೆ. ಇದರಿಂದ ಬ್ಯಾಂಕ್ ಅಭಿವೃದ್ಧಿ ಹೊಂದಿ ರೈತರು, ಮಹಿಳೆಯರ ಮನೆ ಬಾಗಿಲಿಗೆ ಸಾಲ ತಲುಪಿಸುವ ಶಕ್ತಿ ಪಡೆದಿದೆ. ಬ್ಯಾಂಕ್‌ನ ವಿಚಾರದಲ್ಲಿ ರಾಜಕೀಯ ಬೆರೆಸಿ ಟೀಕಿಸಿದರೆ ದೇವರು ಮೆಚ್ಚುವುದಿಲ್ಲ’ ಎಂದರು.

‘ಮಹಿಳೆಯರು ಮತ್ತು ರೈತರು ಬ್ಯಾಂಕ್‌ನ ಆಧಾರಸ್ತಂಭಗಳು. ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಸಾಲ ನೀಡಿದ್ದೇವೆ. ಎಸ್‌ಎಫ್‌ಸಿಎಸ್‌ ಆರ್ಥಿಕ ಚಟುವಟಿಕೆಗಳಿಗೆ ಬಡ್ಡಿರಹಿತ ಸಾಲ ನೀಡುತ್ತೇವೆ. ಸಬಲತೆ ಸಾಧಿಸಿ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಆಶಿಸಿದರು.

ಸಾಲ ಮನ್ನಾ ಲಾಭ: ‘ಡಿಸಿಸಿ ಬ್ಯಾಂಕ್ ದಿವಾಳಿಯಾಗಿದ್ದರಿಂದ ಜಿಲ್ಲೆಯ ರೈತರು ಮತ್ತು ಮಹಿಳೆಯರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದರಿಂದ ಜಿಲ್ಲೆಯ ರೈತರಿಗೆ ₹ 323 ಕೋಟಿ ಲಾಭವಾಗಿದೆ’ ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ವಿವರಿಸಿದರು.

‘ಬ್ಯಾಂಕ್‌ನ ಅಸ್ತಿತ್ವಕ್ಕೆ ಧಕ್ಕೆಯಾದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಹಿಳೆಯರು, ರೈತರ ಶಾಪ ಟೀಕಾಕಾರರಿಗೆ ತಟ್ಟುತ್ತದೆ. ಕೆಲವರು ಬ್ಯಾಂಕ್ ವಿರುದ್ಧ ಮನಬಂದಂತೆ ಮಾತನಾಡಿ ಟೀಕೆ ಮಾಡಿದ್ದಾರೆ. ಹಿಂದೆ ಬ್ಯಾಂಕ್‌ ದಿವಾಳಿಯಾಗಿ ರೈತರು ಮತ್ತು ಮಹಿಳೆಯರಿಗೆ ಅನ್ಯಾಯವಾದಾಗ ಇವರು ಎಲ್ಲಿಗೆ ಹೋಗಿದ್ದರು’ ಎಂದು ಪರೋಕ್ಷವಾಗಿ ಸಂಸದ ಎಸ್‌.ಮುನಿಸ್ವಾಮಿ ವಿರುದ್ಧ ಹರಿಹಾಯ್ದರು.

ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಜತೆ ಅರಿಶಿನ, ಕುಂಕುಮ ನೀಡಿ ಮಡಿಲು ತುಂಬಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ವಕ್ಕಲೇರಿ ಎಸ್‌ಎಫ್‌ಸಿಎಸ್‌ ಉಪಾಧ್ಯಕ್ಷ ಸದಾಶಿವಯ್ಯ, ನಿರ್ದೇಶಕರಾದ ಆನಂದಕುಮಾರ್, ಚಂದ್ರೇಗೌಡ, ಮುನಿಯಪ್ಪ, ವೆಂಕಟಗಿರಿಯಪ್ಪ, ಭಾಗ್ಯಲಕ್ಷ್ಮಿ, ವೆಂಕಟಾಚಲಯ್ಯ, ಎಂ.ಮಾರ್ಕಂಡಪ್ಪ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು