ಭಾನುವಾರ, ಸೆಪ್ಟೆಂಬರ್ 22, 2019
27 °C

ಡಿಸಿಸಿ ಬ್ಯಾಂಕ್ ಬಡವರ ಪಾಲಿನ ದೇವಾಲಯ

Published:
Updated:
Prajavani

ಕೋಲಾರ: ‘ಡಿಸಿಸಿ ಬ್ಯಾಂಕ್ ಅವಿಭಜಿತ ಜಿಲ್ಲೆಯ 2.63 ಲಕ್ಷ ಕುಟುಂಬಗಳಿಗೆ ಶೂನ್ಯಬಡ್ಡಿದರದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರು, ರೈತರು, ಬಡವರ ಪಾಲಿನ ದೇವಾಲಯವಾಗಿದೆ’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ವಲ್ಲಂಬಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಂಗಳವಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯಬಡ್ಡಿ ಸಾಲದ ಚೆಕ್ ವಿತರಿಸಿ ಮಾತನಾಡಿ, ಬಡವರ ಬಳಿ ಇರುವ ಅಲ್ಪ ಸ್ವಲ್ಪ ಆಸ್ತಿಯನ್ನು ಅಡಮಾನ ಇಟ್ಟುಕೊಂಡು ವಾಣಿಜ್ಯ ಬ್ಯಾಂಕ್‌ಗಳು, ಲೇವಾದೇವಿದಾರರು ಸಾಲ ನೀಡಿ ಕಬಳಿಸುತ್ತಾರೆ, ಅತಂಹ ಸಂಸ್ಥೆಗಳಿಂದ ಇನ್ನಾದರೂ ರೈತರು, ಮಹಿಳೆಯರು ದೂರು ಉಳಿಯಬೇಕು’ ಎಂದು ಸಲಹೆ ನೀಡಿದರು.

‘ರಾಜಕಾರಣ ಬಿಟ್ಟು ಆಲೋಚಿಸಿದರೆ ಬಡವರ  ಪಾಲಿನ ದೇವಾಲಯವಾಗಿ ಬ್ಯಾಂಕ್ ಕೆಲಸ ಮಾಡುತ್ತಿದೆ. ಬ್ಯಾಂಕನ್ನು ಮತ್ತಷ್ಟು ಶಕ್ತಿಯುತಗೊಳಿಸಲು ಪಡೆದ ಸಾಲವನ್ನು ಪ್ರಾಮಾಣಿಕತೆಯಿಂದ ವಾಪಸ್ಸು ಮಾಡಬೇಕು. ಬ್ಯಾಂಕ್ ಎರಡೂ ಜಿಲ್ಲೆಗಳ ಪ್ರತಿಕುಟುಂಬಕ್ಕೂ ಆರ್ಥಿಕ ನೆರವು ತಲುಪಿಸುವ ಶಕ್ತಿ ಪಡೆದುಕೊಂಡಿದ್ಡದು, ಜನ ವಾಣಿಜ್ಯ ಬ್ಯಾಂಕುಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಡಿಸಿಸಿ ಬ್ಯಾಂಕಿನ ಪ್ರಯತ್ನ ಸಹಿಸಲಾಗದ ಲೇವಾದೇವಿದಾರರು, ವಾಣಿಜ್ಯ ಬ್ಯಾಂಕ್‌ಗಳವರು ಅಪಪ್ರಚಾರ ಮಾಡುತ್ತಿದ್ದಾರೆ, ಇದು ಯಾವುದಕ್ಕೂ ರೈತರು, ಮಹಿಳೆಯರು ಕಿವಿಗೋಡಬಾರದು’ ಎಂದು ತಿಳಿಸಿದರು.

‘ದಿವಾಳಿಯಾಗಿದ್ದ ಬ್ಯಾಂಕನ್ನು ತಮ್ಮ ಸೇವಾವಧಿಯಲ್ಲಿ ಪುನಶ್ಚೇತನಗೊಳಿಸಲಾಗಿದೆ.  ಬಡವರು, ರೈತರು, ಮಹಿಳೆಯರಿಗೆ ನೆರವಾಗುವ ಶಕ್ತಿ ತುಂಬಿದ್ದೇವೆ. ಎರಡೂ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ನೆರವಾಗುವ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ ಉಳಿಸಲು ತಾಯಂದಿರುವ ಸಮರ್ಪಕ ಸಾಲ ಮರುಪಾವತಿ ಮಾಡಬೇಕು’ ಎಂದು ಮನವಿ ಮಾಡಿದರು.

‘ಡಿಸಿಸಿ ಬ್ಯಾಂಕ್‍ನಲ್ಲೇ ಸರ್ಕಾರದ ವಿವಿಧ ಇಲಾಖೆಗಳ ಹಣ ಠೇವಣಿ ಇಡುವಂತಾದರೆ ಮತ್ತಷ್ಟು ಜನತೆಗೆ ನೆರವು ನೀಡಲು ಸಾಧ್ಯವಾಗುತ್ತದೆ. ರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ ಹಣ ಡಿಸಿಸಿ ಬ್ಯಾಂಕಿನಲ್ಲಿ ಇಟ್ಟು ಮತ್ತೊಬ್ಬರಿಗೆ ನೆರವಾಗಬೇಕು’ ಎಂದು ಕೋರಿದರು.

ಬ್ಯಾಂಕಿನ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್ ಮಾತನಾಡಿ, ‘ಶೂನ್ಯಬಡ್ಡಿ ದರದ ಸಾಲ ನೀಡುವ ಧೈರ್ಯವನ್ನು ಸಿದ್ದರಾಮಯ್ಯ ಮಾಡಿದರು. ನೀವು ಕಟ್ಟಬೇಕಾದ ಬಡ್ಡಿಯನ್ನು ಸರ್ಕಾರವೇ ಪಾವತಿ ಮಾಡುತ್ತದೆ. ಸಾಲ ಮರುಪಾವತಿ ಮಾಡದೆ ಮೋಸ ಮಾಡಲು ಹೋದರೆ ಮುಂದಿನ ದಿನಗಳಲ್ಲಿ ಸಾಲ ದೊರೆಯುವುದಿಲ್ಲ’ ಎಂದು ಎಚ್ಚರಿಸಿದರು.

ಬ್ಯಾಂಕಿನ ಸೂಪರ್ವೈಸರ್  ಅಮಿನ್, ಮುಖಂಡರಾದ ಗೋಪಾಲಗೌಡ, ಮುನಿವೆಂಕಟಪ್ಪ,  ಕೋದಂಡಪ್ಪ, ಚಲಪತಿ, ಇಂದಾಲಪ್ಪ, ಚೌಡಪ್ಪ, ವೆಂಕಟೇಶಪ್ಪ ಹಾಜರಿದ್ದರು. 

Post Comments (+)