ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ನ ಡಿಜಿಟಲೀಕರಣ ಕ್ರಾಂತಿ

ನಬಾರ್ಡ್ ಮಹಾ ಪ್ರಧಾನ ವ್ಯವಸ್ಥಾಪಕ ನೀರಜ್‌ಕುಮಾರ್ ವರ್ಮಾ ಮೆಚ್ಚುಗೆ
Last Updated 23 ಜನವರಿ 2021, 13:04 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ಡಿಸಿಸಿ ಬ್ಯಾಂಕ್‌ನ ವಹಿವಾಟು ಡಿಜಿಟಲೀಕರಣ ಕ್ರಾಂತಿಯು ಇತರೆ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ. ಬ್ಯಾಂಕ್‌ ದೇಶದಲ್ಲೇ ಮೊದಲ ಬಾರಿಗೆ ಜನರ ಮನೆ ಬಾಗಿಲಿಗೆ ಎಲ್ಲಾ ಬ್ಯಾಂಕಿಂಗ್ ಸೇವೆ ಕಲ್ಪಿಸಿದೆ’ ಎಂದು ನಬಾರ್ಡ್ ಮಹಾ ಪ್ರಧಾನ ವ್ಯವಸ್ಥಾಪಕ ನೀರಜ್‌ಕುಮಾರ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಡಿಸಿಸಿ ಬ್ಯಾಂಕ್‌ನ ಮೊಬೈಲ್ ಬ್ಯಾಂಕಿಂಗ್ ಸೇವಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಬ್ಯಾಂಕ್ ಸೇವೆ ಸಿಗಬೇಕು. ಸರ್ವರಿಗೂ ಉತ್ತಮ ಬ್ಯಾಂಕ್ ಸೌಲಭ್ಯ ಕಲ್ಪಿಸಬೇಕೆಂಬ ಡಿಸಿಸಿ ಬ್ಯಾಂಕ್‌ನ ಕಲ್ಪನೆ ಸಹಕಾರಿ ಕ್ಷೇತ್ರದ ಅತಿ ದೊಡ್ಡ ಸಾಧನೆ’ ಎಂದು ಬಣ್ಣಿಸಿದರು.

‘ಈ ಹಿಂದೆ ದಿವಾಳಿಯಾಗಿದ್ದ ಬ್ಯಾಂಕ್‌ ಆರ್ಥಿಕವಾಗಿ ಚೇತರಿಸಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಮುಚ್ಚುವ ಹಂತ ತಲುಪಿದ್ದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಹಾಗೂ ಮಹಿಳೆಯರ ಬದುಕು ರೂಪಿಸಿದೆ. ಇದರ ಆಡಳಿತ ಮಂಡಳಿಯ ಪರಿಶ್ರಮವಿದೆ’ ಎಂದು ಅಭಿಪ್ರಾಯಪಟ್ಟರು.

‘ಜನರ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ಕಲ್ಪಿಸಲು ಸಂಚಾರಿ ವಾಹನಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳ ಪಾತ್ರ ನಿರ್ಣಾಯಕ’ ಎಂದು ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಾನಿ ಹೇಳಿದರು.

ಐತಿಹಾಸಿಕ ದಿನ: ‘ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿರುವ ಈ ದಿನ ಐತಿಹಾಸಿಕವಾದದ್ದು. ಜನಪರ ಸೇವೆಯು ನಮ್ಮ ಪ್ರತಿಜ್ಞೆ. ತೆಗಳಿಕೆ ಸವಾಲಾಗಿ ಸ್ವೀಕರಿಸಬೇಕು. ಬ್ಯಾಂಕ್‌ನ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವನ್ನು ಶೇ 1ಕ್ಕೆ ಇಳಿಸಬೇಕು. ಎನ್‌ಪಿಎ ಕಡಿಮೆ ಮಾಡಿದರೆ ಮಾತ್ರ ಬ್ಯಾಂಕ್ ಉಳಿಯಲು ಸಾಧ್ಯ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸಿಬ್ಬಂದಿಗೆ ಕಿವಿಮಾತು ಹೇಳಿದರು.

‘ಈ ಹಿಂದೆ ಎನ್‌ಪಿಎ ಪ್ರಮಾಣ ಶೇ 98ರಷ್ಟಿತ್ತು. ಎನ್‌ಪಿಎ ಕಡಿಮೆಯಾದರೆ ಬ್ಯಾಂಕ್ ಸುಧಾರಣೆ ಸಾಧ್ಯ. ಸಿಬ್ಬಂದಿಯು ಕುಟುಂಬದ ಕೆಲಸದಂತೆ ಬ್ಯಾಂಕ್‌ನ ಕೆಲಸ ಮಾಡಬೇಕು. ದುಡಿಮೆಗೆ ತಕ್ಕಂತೆ ಸೌಲಭ್ಯ ಕಲ್ಪಿಸಿದ್ದೇವೆ. ಅಚ್ಚುಕಟ್ಟಾಗಿ ಕೆಲಸ ಮಾಡಿ ಗೌರವ ಉಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಗಣಕೀಕರಣ: ‘ಗಣಕೀಕರಣ ಪ್ರಕ್ರಿಯೆ ಶೀಘ್ರದಲ್ಲೇ ಶೇ 100ರಷ್ಟು ಸಾಧನೆಯಾಗಲಿದೆ. ಅವಿಭಜಿತ ಜಿಲ್ಲೆಯ ಪ್ರತಿ ಮನೆ ಬಾಗಿಲಿಗೂ ಬ್ಯಾಂಕ್ ಸೇವೆ ಕಲ್ಪಿಸಿ ನಬಾರ್ಡ್‌ನ ನಂಬಿಕೆ ಉಳಿಸಿಕೊಳ್ಳಬೇಕು. ಸಾಧನೆಯತ್ತ ಹೆಜ್ಜೆ ಇಡಲು ಆಡಳಿತ ಮಂಡಳಿ ಜತೆಗೆ ಸಿಬ್ಬಂದಿ ಕೈಜೋಡಿಸಬೇಕು. ಕೆಲಸ ಮಾಡಲು ಯೋಗ್ಯತೆಯಿಲ್ಲದಿದ್ದರೆ ಕೆಲಸ ಬಿಟ್ಟು ಹೊರ ಹೋಗಿ’ ಎಂದು ತಾಕೀತು ಮಾಡಿದರು.

‘ಅವಳಿ ಜಿಲ್ಲೆಯ ಹೆಣ್ಣು ಮಕ್ಕಳಿಗೆ ಬ್ಯಾಂಕ್‌ನ ಬಗ್ಗೆ ನಂಬಿಕೆ ಬೆಳೆಯುವಂತೆ ಮಾಡಿದ್ದೇವೆ. ದಲ್ಲಾಳಿಗಳಿಗೆ ಅವಕಾಶವಿಲ್ಲದಂತೆ ಸೇವೆ ಮಾಡಿದ್ದೇವೆ. ಸಾಲ ನೀಡಿಕೆಯನ್ನು ಆಂದೋಲನವಾಗಿ ರೂಪಿಸಿದ್ದೇವೆ. ನಬಾರ್ಡ್‌ ಮತ್ತಷ್ಟು ಸಹಕಾರ ನೀಡಿದರೆ ಆರ್ಥಿಕಾಭಿವೃದ್ದಿ ಮತ್ತು ಸಾಲ ಸೌಲಭ್ಯ ವೃದ್ದಿಸಲು ಸಹಾಯವಾಗುತ್ತದೆ’ ಎಂದು ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ನಾಗರಾಜ್‌, ನಿರ್ದೇಶಕರಾದ ನಾಗಿರೆಡ್ಡಿ, ರೇವಣ್ಣ, ಎಂ.ಎಲ್.ಅನಿಲ್‌ಕುಮಾರ್, ಮೋಹನ್‌ರೆಡ್ಡಿ, ವೆಂಕಟರೆಡ್ಡಿ, ಗೋವಿಂದರಾಜುಲು, ನಾರಾಯಣರೆಡ್ಡಿ, ಅಶ್ವತ್ಥಪ್ಪ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವಿ, ಎಕ್ಸ್‌ಪೇ ಕಂಪನಿ ಸಿಇಒ ರೋಹಿತ್‌ಕುಮಾರ್, ನಿರ್ದೇಶಕ ಕಾರ್ತಿಕ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT