ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಜತೆ ಪ್ಯಾರಾ ಗ್ಲೈಡಿಂಗ್‌ಗೆ ತೆರಳಿ, ಸಭೆಗೆ ಡಿಸಿಎಫ್‌ ಗೈರು, ನೋಟಿಸ್ ಜಾರಿ

Last Updated 21 ಸೆಪ್ಟೆಂಬರ್ 2019, 15:10 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಚಕ್ರಪಾಣಿ ಅವರು ಇಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಗೈರಾಗಿ ಮಕ್ಕಳೊಂದಿಗೆ ಪ್ಯಾರಾ ಗ್ಲೈಡಿಂಗ್‌ ಮಾಡುತ್ತಾ ಸಮಯ ಕಳೆದಿದ್ದು, ಚರ್ಚೆಗೆ ಗ್ರಾಸವಾಗಿದೆ.

ಜಿ.ಪಂ ಸಭೆಯ ಸಂಬಂಧ ಚಕ್ರಪಾಣಿ ಅವರನ್ನು ಒಳಗೊಂಡಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿವಳಿಕೆ ಪತ್ರ ನೀಡಲಾಗಿತ್ತು. ಆದರೂ ಸಭೆಗೆ ಗೈರಾದ ಚಕ್ರಪಾಣಿ ಅವರು ತಮ್ಮ ಬದಲು ಕಚೇರಿ ಸಹಾಯಕ ಅಧಿಕಾರಿಯನ್ನು ಕಳುಹಿಸಿದ್ದರು.

ಸಭೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ವಿಷಯಗಳು ಚರ್ಚೆಗೆ ಬಂದಾಗ ಚಕ್ರಪಾಣಿ ಅವರ ಕಚೇರಿ ಸಹಾಯಕ ಅಧಿಕಾರಿ ಉತ್ತರ ನೀಡಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ‘ಚಕ್ರಪಾಣಿ ಅವರು ಯಾವ ಸಭೆಗೂ ಬರುವುದಿಲ್ಲ. ಬಹುಪಾಲು ಸದಸ್ಯರು ಅವರ ಮುಖ ಸಹ ನೋಡಿಲ್ಲ. ಅವರನ್ನು ಸಭೆಗೆ ಕರೆಸಿ’ ಎಂದು ಪಟ್ಟು ಹಿಡಿದರು.

ಆಗ ಜಿ.ಪಂ ಸಿಇಒ ಜೆ.ಮಂಜುನಾಥ್‌ ಸಹಾಯಕ ಅಧಿಕಾರಿಯಿಂದ ಚಕ್ರಪಾಣಿ ಅವರಿಗೆ ಕರೆ ಮಾಡಿಸಿದರು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಸಿಇಒ, ‘ಸಭೆಗೆ ಗೈರಾಗಿರುವ ಸಂಬಂಧ ಕಾರಣ ಕೇಳಿ ಚಕ್ರಪಾಣಿ ಅವರಿಗೆ ನೋಟಿಸ್ ಜಾರಿ ಮಾಡುತ್ತೇನೆ’ ಎಂದು ಸದಸ್ಯರಿಗೆ ಭರವಸೆ ನೀಡಿದರು.

ನಗರದ ಹೊರವಲಯದ ಶತಶೃಂಗ ಬೆಟ್ಟದಲ್ಲಿ ಬೀಜ ಬಿತ್ತನೆಗಾಗಿ ಅರಣ್ಯ ಇಲಾಖೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ಯಾರಾ ಗ್ಲೈಡರ್‌ಗಳನ್ನು ಕರೆಸಲಾಗಿದೆ. ಅವರ ಜತೆ ಪ್ಯಾರಾ ಗ್ಲೈಡಿಂಗ್‌ ಮಾಡಲು ಚಕ್ರಪಾಣಿ ಅವರು ತಮ್ಮ ಪುತ್ರಿ ಮತ್ತು ಮಗನಿಗೆ ಶನಿವಾರ ಅವಕಾಶ ಕಲ್ಪಿಸಿಕೊಟ್ಟರು.

ಜಿ.ಪಂಯಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದರೆ ಚಕ್ರಪಾಣಿ ತಮ್ಮ ಮಕ್ಕಳು ಪ್ಯಾರಾ ಗ್ಲೈಡಿಂಗ್‌ ಮಾಡುವುದನ್ನು ವಿಡಿಯೊ ಚಿತ್ರೀಕರಿಸುತ್ತಾ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಲ ಕಳೆದರು. ಇದಕ್ಕೆ ಸಂಬಂಧಪಟ್ಟ ಚಿತ್ರಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT