ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ ಏರಿಕೆಗೆ ಗಡುವು

ಸಿ.ಎಂ ನಿರ್ಧಾರದ ಬಳಿಕ ಹೋರಾಟ: ಶಾಸಕ ಕೆ.ವೈ. ನಂಜೇಗೌಡ ಹೇಳಿಕೆ
Last Updated 17 ನವೆಂಬರ್ 2022, 6:07 IST
ಅಕ್ಷರ ಗಾತ್ರ

ಮಾಲೂರು: ‘ಸಹಕಾರ ಕ್ಷೇತ್ರ ರೈತರ ಪರ ಕೆಲಸ ಮಾಡುತ್ತಿದ್ದು, ಅನ್ನದಾತರ ಸಂಜೀವಿನಿಯಾಗಿದೆ’ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.

ಪಟ್ಟಣದ ಕೋಮುಲ್ ಶಿಬಿರ ಕಚೇರಿ ಆವರಣದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದಿಂದ ಬುಧವಾರ ಆಯೋಜಿಸಿದ್ದ 69ನೇ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರಿಗೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ₹ 2 ಪ್ರೋತ್ಸಾಹಧನ ನೀಡಿದ್ದರು. ಅದನ್ನು ಮುಂದುವರಿಸಿದ್ದ ಸಿದ್ದರಾಮಯ್ಯ ₹ 3 ನೀಡಿ ಪ್ರೋತ್ಸಾಹಧನವನ್ನು ₹ 5ಕ್ಕೆ ಏರಿಸಿದ್ದರು ಎಂದು ಹೇಳಿದರು.

ಈಗ ಕೆಎಂಎಫ್ ₹ 3 ಎಂಆರ್‌ಪಿ ದರ ಏರಿಸಿ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದನ್ನು ತಡೆಹಿಡಿದಿದ್ದು, ಇದೇ 20ಕ್ಕೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಒಂದು ವೇಳೆ ದರ ಏರಿಕೆ ಮಾಡದೆ ಹೋದರೆ ರಾಜ್ಯದ ಎಲ್ಲಾ ಒಕ್ಕೂಟಗಳು ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ನಡೆಸಲು ತೀರ್ಮಾನಿಸಿವೆ ಎಂದು ತಿಳಿಸಿದರು.

ಸಹಕಾರ ತತ್ವ ಮತ್ತು ಆಚರಣೆಯಲ್ಲಿ ಪಂಡಿತ ಜವಾಹರಲಾಲ್ ನೆಹರೂ ಅಪಾರ ವಿಶ್ವಾಸ ಹೊಂದಿದ್ದರು. ಸಹಕಾರ ತತ್ವದ ಮೂಲಕ ರಾಷ್ಟ್ರದ ಭವಿಷ್ಯ ನಿರ್ಧರಿಸಬಹುದೆಂಬ ಆಶಯ ಹೊಂದಿದ್ದರು. ಇದಕ್ಕಾಗಿ ಹಲವಾರು ಯೋಜನೆ ರೂಪಿಸಿದರು. ಇದು ಸಹಕಾರ ಚಳವಳಿಯ ಬೆಳವಣಿಗೆಗೆ ಸಹಕಾರಿಯಾಯಿತು ಎಂದರು.

ವಿಶ್ವದಲ್ಲಿ ಅತ್ಯುತ್ತಮ ಸಹಕಾರ ಚಳವಳಿ ಹೊಂದಿದ ಹಿರಿಮೆ ಭಾರತಕ್ಕಿದೆ. ಪ್ರತಿವರ್ಷ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರದಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತದೆ. ಈ ಬಾರಿ ‘ಸಹಕಾರ ಸಂಘಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಸಾಲ ವಿತರಣೆ, ಮರುಪಾವತಿಯಿಂದ ಆರ್ಥಿಕವಾಗಿ ಬಲಿಷ್ಠವಾಗುತ್ತಿರುವ ಸಹಕಾರ ಸಂಘ ಗಳು ರೈತರ ಪರ ನಿಂತಿವೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಡಾ.ಇ. ಗೋಪಾಲಪ್ಪ, ಉಪಾಧ್ಯಕ್ಷ ಟಿ.ಕೆ. ಬೈರೇಗೌಡ, ಮಾಜಿ ಉಪಾಧ್ಯಕ್ಷ ಎಸ್.ವಿ. ಗೋವರ್ಧನ ರೆಡ್ಡಿ, ನಿರ್ದೇಶಕರಾದ ರುದ್ರಸ್ವಾಮಿ, ಅರುಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್. ಚನ್ನರಾಯಪ್ಪ, ಕೋಮುಲ್ ನಿರ್ದೇಶಕಿ ಕಾಂತಮ್ಮ ಸೋಮಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಆನೇಪುರ ಹನುಮಂತಪ್ಪ, ಟಿಎಪಿಎಂಸಿಎಸ್ ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ಬೈಯ್ಯಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಸ್ವಾಮಿ, ಸಹಕಾರ ಸಂಘಗಳ ಉಪ ನಿಬಂಧಕ ಕೆ.ಎನ್. ನಾಗರಾಜ್, ಸಹಕಾರ ಒಕ್ಕೂಟದ ಇಒ ಲಕ್ಷ್ಮೀ, ವ್ಯವಸ್ಥಾಪಕಿ ಲಕ್ಷ್ಮೀದೇವಿ, ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಪ್ಪ, ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಎಂ.ಪಿ. ಚೇತನ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT