ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ತೆರಿಗೆ ಹಣದಲ್ಲಿ ಸಾಲ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಪ್ರಗತಿ ಪರಿಶೀಲನಾ ಸಭೆ
Last Updated 11 ಜುಲೈ 2020, 12:39 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್ ನೀಡುತ್ತಿರುವ ಸಾಲ ಯಾರಪ್ಪನ ದುಡ್ಡು ಅಲ್ಲ. ಇದು ಜನರ ಹಣ. 50 ಜನರಿಗೆ ಸಾಲ ನೀಡುವ ಶಕ್ತಿ ಇಲ್ಲವಾಗಿದ್ದ ಬ್ಯಾಂಕ್‌ಗೆ ಈಗ 5.50 ಲಕ್ಷ ರೈತರು ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಶಕ್ತಿ ತುಂಬಿದ್ದೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ನಾನಾಗಲಿ ಅಥವಾ ಯಾವುದೇ ಜನಪ್ರತಿನಿಧಿಗಳಾಗಲಿ ಮನೆಯಿಂದ ದುಡ್ಡು ತಂದು ಹಾಕೋದಿಲ್ಲ. ಜನರ ತೆರಿಗೆ ಹಣದಲ್ಲೇ ಸಾಲ ನೀಡುತ್ತಿದ್ದೇವೆ’ ಎಂದರು.

‘ಸಾಲ ನೀಡುವಲ್ಲಿ ವಿಳಂಬ ಆಗಿರಬಹುದು. ಆದರೆ, ಯಾರನ್ನೂ ವಂಚಿಸಿಲ್ಲ. ಟೀಕೆ ಮಾಡುವವರು ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎಂದು ದಾಖಲೆಪತ್ರ ಸಮೇತ ಬಂದು ತಿಳಿಸಿದರೆ ತಪ್ಪಿತಸ್ಥರ ವಿರುದ್ಧ ಖಂಡಿತ ಶಿಸ್ತುಕ್ರಮ ಜರುಗಿಸುತ್ತೇವೆ. ಬ್ಯಾಂಕ್, ಮಹಿಳೆಯರು, ರೈತರ ಹಿತಕ್ಕಾಗಿ ಟೀಕಾಕಾರರು ನೀಡುವ ಸಲಹೆಯನ್ನು ಗೌರವದಿಂದ ಸ್ವೀಕರಿಸುತ್ತೇವೆ’ ಎಂದು ತಿಳಿಸಿದರು.

‘ಕೋವಿಡ್‌–19 ಸಂಕಷ್ಟದಿಂದ ಅನೇಕ ಕಡೆ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಆದರೆ, ಡಿಸಿಸಿ ಬ್ಯಾಂಕ್‌ನ ಸಿಬ್ಬಂದಿಗೆ ಅನ್ಯಾಯ ಮಾಡಿಲ್ಲ. ಸಕಾಲಕ್ಕೆ ಸಂಬಳ ಕೊಟ್ಟು ಕುಟುಂಬ ಪೋಷಿಸುತ್ತಿದ್ದೇವೆ. ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

ಸಾಲ ನೀಡುವುದಿಲ್ಲ: ‘ಆಯಾ ಬ್ಯಾಂಕ್ ಶಾಖೆ ವ್ಯಾಪ್ತಿಯ ಸೊಸೈಟಿಗಳಲ್ಲಿ ಗಣಕೀಕರಣ ಹಾಗೂ ಲೆಕ್ಕ ಪರಿಶೋಧನೆ ಪೂರ್ಣಗೊಳಿಸದಿದ್ದರೆ ಹೊಸ ಸಾಲ ನೀಡುವುದಿಲ್ಲ. ಈ ತಿಂಗಳ ಅಂತ್ಯದೊಳಗೆ ಗಣಕೀಕರಣ ಮತ್ತು ಲೆಕ್ಕ ಪರಿಶೋಧನೆ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ಜುಲೈ ಅಂತ್ಯದೊಳಗೆ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಸದಸ್ಯರ ವೈಯಕ್ತಿಕ ಖಾತೆಯನ್ನು ಡಿಸಿಸಿ ಬ್ಯಾಂಕ್‌ನಲ್ಲಿ ತೆರೆಸಿ ಎಟಿಎಂ ಕಾರ್ಡ್ ನೀಡಬೇಕು. ಈ ಸಂಬಂಧ ಕೋಚಿಮುಲ್‌ನಿಂದ ಸುತ್ತೋಲೆ ಹೊರಡಿಸುವಂತೆ ಕೋರುತ್ತೇವೆ’ ಎಂದು ವಿವರಿಸಿದರು.

ಬದ್ಧತೆಯ ಕೆಲಸ: ‘ವಾಣಿಜ್ಯ ಬ್ಯಾಂಕ್‌ಗಳ ಪೈಪೋಟಿ ಸಮರ್ಥವಾಗಿ ಎದುರಿಸಲು ಸಿದ್ಧರಾಗಿ. ಬದ್ಧತೆಯಿಂದ ಕೆಲಸ ಮಾಡಿ ಬ್ಯಾಂಕ್‌ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ದಾಖಲೆಪತ್ರ ನಿರ್ವಹಣೆ ಸಮರ್ಪಕವಾಗಿರಬೇಕು’ ಎಂದು ಬ್ಯಾಂಕ್‌ನ ನಿರ್ದೇಶಕ ಸೊಣ್ಣೇಗೌಡ ಸೂಚಿಸಿದರು.

ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಬೈರೇಗೌಡ, ಶಿವಕುಮಾರ್, ನಾಗೇಶ್, ಖಲೀಮ್‌ ಉಲ್ಲಾ, ಚೌಡಪ್ಪ, ವ್ಯವಸ್ಥಾಪಕ ಹುಸೇನ್ ದೊಡ್ಡಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT