ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಿತರಣೆ: ತಾರತಮ್ಯ ಮಾಡಿಲ್ಲ

ಡಿಸಿಸಿ ಬ್ಯಾಂಕ್ ನಿರ್ದೇಶಕ ದಯಾನಂದ್ ಹೇಳಿಕೆ
Last Updated 25 ಸೆಪ್ಟೆಂಬರ್ 2019, 15:46 IST
ಅಕ್ಷರ ಗಾತ್ರ

ಕೋಲಾರ: ‘ರೈತರ ಮತ್ತು ಮಹಿಳೆಯರ ಪರವಾಗಿ ಬ್ಯಾಂಕ್ ಸೇವೆ ಸಲ್ಲಿಸುತ್ತಿದ್ದು, ಸಾಲ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ತಿಳಿಸಿದರು.

ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ ಬುಧವಾರ ನಡೆದ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್‌ನ ಸಾಧನೆ ಸಹಿಸಲಾಗದ ಕೆಲ ವ್ಯಕ್ತಿಗಳು ವದಂತಿ ಹಬ್ಬಿಸುತ್ತಿದ್ದು, ಇದಕ್ಕೆ ಕಿವಿಗೊಡಬಾರದು’ ಎಂದರು.

‘ಸೊಸೈಟಿಗಳ ನಿರ್ವಹಣೆ ಸರಿಯಿದ್ದರೆ ಸಾಲದ ಫಲಾನುಭವಿಗಳು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೆ. ಸಾಲ ವಸೂಲಾತಿ ವಿಚಾರದಲ್ಲಿ ಆಡಳಿತ ಮಂಡಳಿಯವರು ಯಾರ ಪರವಾಗಿಯೂ ವಕಾಲತ್ತು ವಹಿಸಬಾರದು’ ಎಂದು ಸಲಹೆ ನೀಡಿದರು.

‘ಸೊಸೈಟಿ ಆಡಳಿತ ಮಂಡಳಿಯವರು ಸಾಲ ಕಟ್ಟದವರ ಮನೆ ಬಳಿ ಹೋಗಿ ಹಣ ವಸೂಲು ಮಾಡಬೇಕು. ಮಹಿಳೆಯರು ಪಡೆದ ಸಕಾಲಕ್ಕೆ ಮರುಪಾವತಿಯಾಗುತ್ತಿದೆ. ಬೆಳೆ ಸಾಲ ವಾಪಸ್ ಬರುತ್ತಿಲ್ಲ. ಇದನ್ನು ವಸೂಲಿ ಮಾಡದಿದ್ದರೆ ಸೊಸೈಟಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ’ ಎಂದು ಹೇಳಿದರು.

‘ಕ್ಯಾಲನೂರು ಸೊಸೈಟಿಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಿಂದ ಬಾಡಿಗೆ ಬರುತ್ತದೆ. ಇದರ ಜತೆಗೆ ಗೊಬ್ಬರ ಮಾರಾಟದ ಹಣ ಬರುತ್ತದೆ. ಲಾಭದ ಪ್ರಮಾಣ ಹೆಚ್ಚಿಸಬೇಕು. ಅರ್ಜಿ ಹಾಕಿದ ತಕ್ಷಣ ಸಾಲ ಮಂಜೂರಾಗುವುದಿಲ್ಲ. ಮೊದಲು ಸೊಸೈಟಿ ಆಡಳಿತ ಮಂಡಳಿಯವರು ಶಿಫಾರಸು ಮಾಡಿ ಡಿಸಿಸಿ ಬ್ಯಾಂಕ್‌ಗೆ ಕಳುಹಿಸುತ್ತಾರೆ. ನಂತರ ಅಧಿಕಾರಿಗಳು ದಾಖಲೆಪತ್ರ ಪರಿಶೀಲಿಸಿ ಸಾಲ ನೀಡುತ್ತಾರೆ’ ಎಂದು ವಿವರಿಸಿದರು.

‘ಹಿಂದಿನ ಸಮ್ಮಿಶ್ರ ಸರ್ಕಾರ ಘೋಷಿಸಿದ್ದ ಸಾಲ ಮನ್ನಾ ಯೋಜನೆಯಿಂದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ₹ 320 ಕೋಟಿ ಸಾಲ ಮನ್ನಾ ಆಗಿದೆ. ಇನ್ನು ಸಾಲ ಮನ್ನಾ ಹಣ ಬಾಕಿಯಿದ್ದು, ಇದರಿಂದ ರೈತರಿಗೆ ಪುನಃ ಸಾಲ ಕೊಡಲು ತಡವಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸಾಲ ವಿಳಂಬ: ‘ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಿ ಮೂರ್ನಾಲ್ಕು ತಿಂಗಳು ಕಳೆದರೂ ಸಾಲ ಮಂಜೂರಾಗಿಲ್ಲ. ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದಾರೆ’ ಎಂದು ರೈತರಾದ ಅರುಣ್ ಮತ್ತು ಮಂಜುನಾಥ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ‘ಕೆಲ ರೈತರು ಈ ಹಿಂದೆ ಪಡೆದಿರುವ ಸಾಲ ಮರುಪಾವತಿ ಮಾಡದ ಕಾರಣ ಸುಸ್ತಿಯಾಗಿದ್ದು, ಇದರಿಂದ ಸಾಲ ವಿತರಣೆ ವಿಳಂಬವಾಗಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ₹ 2 ಲಕ್ಷ ಲಾಭ ಗಳಿಸಿದ್ದು, ರೈತರಿಗೆ ಡಿಸೆಂಬರ್‌ನಲ್ಲಿ ಸಾಲ ನೀಡುತ್ತೇವೆ’ ಎಂದು ಉತ್ತರಿಸಿದರು.

45 ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ₹ 1.90 ಕೋಟಿ ಸಾಲ ವಿತರಿಸಲಾಯಿತು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT