ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ಸ್ವಾವಲಂಬಿ ಬದುಕಿಗೆ ಸಾಲ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಭರವಸೆ
Last Updated 5 ಅಕ್ಟೋಬರ್ 2020, 14:02 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌–19 ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳಿಗೆ ಹಿಂದಿರುಗಿರುವ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೋಳಿ, ಕುರಿ, ಹಂದಿ, ಹಸು ಹಾಗೂ ರೇಷ್ಮೆ ಹುಳು ಸಾಕಾಣಿಕೆಗೆ ಬ್ಯಾಂಕ್‌ನಿಂದ ಮಧ್ಯಮಾವಧಿ ಸಾಲ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಭರವಸೆ ನೀಡಿದರು.

ಇಲ್ಲಿ ಸೋಮವಾರ ನಡೆದ ಡಿಸಿಸಿ ಬ್ಯಾಂಕ್‌ನ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌ನಿಂದ ಸಾಕಷ್ಟು ಉದ್ದಿಮೆಗಳಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬಿದ್ದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೃಷಿ ಮಾತ್ರ ನೆಮ್ಮದಿಯ ಬದುಕಿಗೆ ಆಸರೆಯಾಗಿ ನಿಂತಿದೆ’ ಎಂದರು.

‘ಬ್ಯಾಂಕ್‌ ಹಳ್ಳಿಗಳಿಗೆ ವಾಪಸ್‌ ಬಂದು ನಿರುದ್ಯೋಗಿಗಳಾಗಿರುವ ಯುವಕರಿಗೆ ಹಣಕಾಸು ನೆರವು ಬದ್ಧತೆ ಹೊಂದಿದೆ. ಸಿಬ್ಬಂದಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು. ಬದುಕು ಕಟ್ಟಿಕೊಳ್ಳಲು ಮುಂದೆ ಬರುವ ಯುವಕರಿಗೆ ಪ್ರಾಮಾಣಿಕವಾಗಿ ಸಾಲ ಕೊಡಬೇಕು’ ಎಂದು ಸೂಚಿಸಿದರು.

‘ಬ್ಯಾಂಕ್ ಠೇವಣಿ ಸಂಗ್ರಹದ ಗುರಿ ತಲುಪಿಲ್ಲ. ಉಳಿದಂತೆ ಎಲ್ಲಾ ಆಯಾಮಗಳಲ್ಲೂ ಉತ್ತಮ ಸ್ಥಾನ ಪಡೆದಿದೆ. ಠೇವಣಿ ದುಪ್ಪಟ್ಟು ಮಾಡಲು ಸಿಬ್ಬಂದಿ ಇಚ್ಛಾಶಕ್ತಿಯಿಂದ ಕೆಲಸ ಮಾಡಿ. ನಬಾರ್ಡ್‌ನ ಠೇವಣಿ ಸಂಗ್ರಹ ಗುರಿ ಸಾಧಿಸಲು ಪಣ ತೊಡಿ’ ಎಂದು ಕಿವಿಮಾತು ಹೇಳಿದರು.

ದಾಖಲೆ ಬರೆದಿದೆ: ‘ಮಹಿಳೆಯರಿಗೆ ಅತಿ ಹೆಚ್ಚು ಸಾಲ ನೀಡಿಕೆ ಮತ್ತು ಸಾಲ ವಸೂಲಾತಿಯಲ್ಲಿ ಕೋಲಾರ ಡಿಸಿಸಿ ಬ್ಯಾಂಕ್‌ ದಾಖಲೆ ಬರೆದಿದೆ. ಮಹಿಳೆಯರಿಗೆ ಉದ್ಯೋಗಾಧಾರಿತ ತರಬೇತಿ ನೀಡಬೇಕು. ಸಾಲದ ಹಣಕ್ಕಾಗಿ ಅವಲಂಬನೆ ತಪ್ಪಿಸಲು ಬ್ಯಾಂಕ್‌ನ ಠೇವಣಿ ಪ್ರಮಾಣ ಹೆಚ್ಚಿಸಬೇಕು. ವೈಯಕ್ತಿಕ ಠೇವಣಿ ಸಂಗ್ರಹಕ್ಕೆ ಒತ್ತು ಕೊಡಬೇಕು’ ಎಂದು ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜನ್ ಸಲಹೆ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪ್ಯಾಕ್ಸ್‌) ವಿವಿಧೋದ್ದೇಶ ಸೇವಾ ಕೇಂದ್ರವಾಗಿಸುವ ಪ್ರಕ್ರಿಯೆಗೆ ಆದ್ಯತೆ ನೀಡಿ. ರೈತರಿಗೆ ಕೃಷಿ ಸಂಬಂಧಿತ ಪ್ರತಿ ಸೇವೆಯು ಒಂದೇ ಸೂರಿನಡಿ ಸಿಗುವಂತೆ ಮಾಡಲು ಈ ಸೇವಾ ಕೇಂದ್ರಗಳ ಯೋಜನೆ ಅನುಷ್ಠಾನಗೊಳಿಸಿ’ ಎಂದು ಅಫೆಕ್ಸ್ ಬ್ಯಾಂಕ್ ಮುಖ್ಯ ಪ್ರಧಾನ ವ್ಯವಸ್ಥಾಪಕಿ ದಾಕ್ಷಾಯಿಣಿ ಸಲಹೆ ನೀಡಿದರು.

ತರಬೇತಿ ಅಗತ್ಯ: ‘ಆರ್ಥಿಕ ಚಟುವಟಿಕೆಗಳಿಗೆ ತರಬೇತಿ ಅಗತ್ಯ. ಆದ ಕಾರಣ ಸಾಲ ನೀಡುವುದರ ಜತೆಗೆ ತರಬೇತಿಗೂ ಆದ್ಯತೆ ಕೊಡಿ. ಒಂದೆರಡು ಪ್ಯಾಕ್ಸ್ ಹೊರತುಪಡಿಸಿ ಉಳಿದೆಲ್ಲಾ ಸೊಸೈಟಿಗಳ ಲೆಕ್ಕ ಪರಿಶೋಧನೆ ಮುಗಿಸಿರುವುದು ಶ್ಲಾಘನೀಯ’ ಎಂದು ಲೆಕ್ಕ ಪರಿಶೋಧನಾ ಇಲಾಖೆ ಜಂಟಿ ನಿರ್ದೇಶಕಿ ಶಾಂತಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕ ಚೆನ್ನರಾಯಪ್ಪ, ವ್ಯವಸ್ಥಾಪಕ ನಿರ್ದೇಶಕ ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಖಲೀಮ್‌ ಉಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT