ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನಿರ್ಧಾರ

ಪತ್ರಕ್ಕೆ 22 ಸದಸ್ಯರ ಸಹಿ: ಪದಚ್ಯುತಿಗೆ ಕೈಜೋಡಿಸಿದ ಸ್ವಪಕ್ಷೀಯರು
Last Updated 18 ಮಾರ್ಚ್ 2022, 15:38 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ಉಪಾಧ್ಯಕ್ಷ ಎನ್‌.ಎಸ್‌.ಪ್ರವೀಣ್‌ಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಪದಚ್ಯುತಿಗೊಳಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಅವಿಶ್ವಾಸ ನಿರ್ಣಯದ ಪತ್ರಕ್ಕೆ 22 ಸದಸ್ಯರು ಸಹಿ ಹಾಕಿದ್ದಾರೆ.

7 ತಿಂಗಳ ಹಿಂದೆಯೇ ಪ್ರವೀಣ್‌ಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೆರೆಮರೆಯ ಪ್ರಯತ್ನ ನಡೆದಿತ್ತು. ನಗರಸಭೆಯ ಹಲವು ಸದಸ್ಯರು ರಹಸ್ಯ ಸಭೆ ನಡೆಸಿ ಉಪಾಧ್ಯಕ್ಷರ ಪದಚ್ಯುತಿಗೆ ಭೂಮಿಕೆ ಸಿದ್ಧಪಡಿಸಿದ್ದರು.

ಇದಕ್ಕೆ ಪ್ರತಿಯಾಗಿ ಪ್ರವೀಣ್‌ಗೌಡ ಅವರು ನಗರಸಭೆ ಮಳಿಗೆಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ದೂರು ನೀಡುವ ಮೂಲಕ ತಮ್ಮ ರಾಜಕೀಯ ‌ಎದುರಾಳಿಗಳ ವಿರುದ್ಧ ಪ್ರತಿದಾಳ ಉರುಳಿಸಿದ್ದರು. ಹೀಗಾಗಿ ಅವರ ವಿರೋಧಿ ಬಣ ಅವಿಶ್ವಾಸ ನಿರ್ಣಯ ಮಂಡಿಸುವ ನಿರ್ಧಾರದಿಂದ ಹಿಂದೆ ಸರಿದಿತ್ತು.

ನಗರೋತ್ಥಾನ ಯೋಜನೆಯ ₹ 2.50 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದ್ದು, ಇದಕ್ಕೆ ಉಪಾಧ್ಯಕ್ಷರೇ ಕಾರಣವೆಂದು ಅಸಮಾಧಾನಗೊಂಡಿರುವ ಸದಸ್ಯರು ಪ್ರವೀಣ್‌ಗೌಡರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದಾರೆ. ನಗರಸಭೆಯಲ್ಲಿ ಒಟ್ಟಾರೆ 35 ಮಂದಿ ಚುನಾಯಿತ ಸದಸ್ಯರಿದ್ದು, ಈ ಪೈಕಿ 22 ಮಂದಿ ಅವಿಶ್ವಾಸ ನಿರ್ಣಯದ ಪತ್ರಕ್ಕೆ ಸಹಿ ಹಾಕಿದ್ದಾರೆ.

ಅಧ್ಯಕ್ಷೆ ಶ್ವೇತಾ ಅವರು ಸೇರಿದಂತೆ ಸ್ವಪಕ್ಷೀಯ ಸದಸ್ಯರು ಸಹ ಉಪಾಧ್ಯಕ್ಷರ ವಿರುದ್ಧ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಸದಸ್ಯರು ಸಹ ಪಕ್ಷಾತೀತವಾಗಿ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬೆಂಬಲ ಸೂಚಿಸಿದ್ದು, ಮತ್ತಷ್ಟು ಸದಸ್ಯರನ್ನು ಒಗ್ಗೂಡಿಸುವ ಪ್ರಯತ್ನ ಆರಂಭವಾಗಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಪಟ್ಟಂತೆ ಸದಸ್ಯರು ಸಹಿ ಮಾಡಿರುವ ಪತ್ರವನ್ನು ಈಗಾಗಲೇ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಸಲ್ಲಿಸಲಾಗಿದೆ.

ಪ್ರವೀಣ್‌ಗೌಡ ಅವರು 2020ರ ನ.11ರಂದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರ ಕಾರ್ಯವೈಖರಿ ಬಗ್ಗೆ ವಿಶ್ವಾಸವಿಲ್ಲದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದ್ದೇವೆ ಎಂದು ಸದಸ್ಯರು ಸಹಿ ಮಾಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT