ಏಡ್ಸ್ ಕಾಯಿಲೆಗೆ ಅರಿವೇ ಮದ್ದು

ಕೋಲಾರ: ‘ರಾಜ್ಯದಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಕಡಿಮೆಯಿರುವ ಜಿಲ್ಲೆ ಕೋಲಾರವಾಗಿದ್ದು, ಈ ಮಾರಕ ರೋಗದಿಂದ ದೂರವಿರಲು ಜನರಿಗೆ ಮತ್ತಷ್ಟು ಅರಿವು ಮೂಡಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಅಭಿಪ್ರಾಯಪಟ್ಟರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಹಯೋಗದಲ್ಲಿ ನಗರದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್‌ಐವಿ ಸೋಂಕು ಕುರಿತು ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದರಿಂದ ಏಡ್ಸ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ’ ಎಂದರು.
‘ಏಡ್ಸ್ ರೋಗದ ಬಗ್ಗೆ ಅರಿವು ಮೂಡುವುದಕ್ಕೂ ಮೊದಲೇ ಆಕಸ್ಮಿಕವಾಗಿ ಹರಡಿರುತ್ತದೆ. ಇದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ವ್ಯಾಪಕ ಪ್ರಚಾರ ನಡೆಸಬೇಕು. ಶಾಲಾ, ಕಾಲೇಜುಗಳಲ್ಲಿ ಎಚ್‍ಐವಿ ಸೋಂಕು ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಮೂಲಕ ಈ ರೋಗ ನಿಯಂತ್ರಿಸಬಹುದು’ ಎಂದು ಹೇಳಿದರು.
‘ಎಚ್‍ಐವಿ ಸೋಂಕು ಅರಿವಿಲ್ಲದೆ ಬರುತ್ತದೆ. ಈ ಭಯಂಕರ ಕಾಯಿಲೆಗೆ ಅರಿವೇ ಮದ್ದು. ಸೋಂಕಿತರಿಗೆ ನೈತಿಕ ಬೆಂಬಲ ಸೂಚಿಸಲು, ಎಚ್‍ಐವಿಯಿಂದ ಮರಣ ಹೊಂದಿದವರ ನೆನಪಿಗಾಗಿ ಮತ್ತು ಎಲ್ಲರೂ ಒಂದಾಗಿ ಏಡ್ಸ್ ವಿರುದ್ಧ ಹೋರಾಡುವಂತೆ ಪ್ರೇರೇಪಿಸಲು ಪ್ರತಿ ವರ್ಷ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.
ತಿಳಿವಳಿಕೆ ಕೊರತೆ: ‘ಏಡ್ಸ್ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಕೊರತೆಯಿದೆ. ಜನ ಅರಿವಿಲ್ಲದೆ ಮಾಡುವ ತಪ್ಪಿನಿಂದ ಮಾರಕ ಏಡ್ಸ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಎಚ್‌ಐವಿ ಸೋಂಕಿತರನ್ನು ಪ್ರೀತಿ ವಾತ್ಸಲ್ಯದಿಂದ ಕಾಣಬೇಕು. ಅವರಿಗೆ ಪ್ರೋತ್ಸಾಹ ನೀಡಿ ಆತ್ಮಸ್ಥೈರ್ಯ ತುಂಬಬೇಕು’ ಎಂದು ಸಲಹೆ ನೀಡಿದರು.
‘ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕ, ಟ್ರಕ್‌ಗಳು ಓಡಾಡುವ ಜಾಗಗಳಲ್ಲಿ ಹಾಗೂ ವಾಹನ ಚಾಲಕರು ತಂಗುವ ಸ್ಥಳಗಳಲ್ಲಿ ಹೆಚ್ಚಾಗಿ ಏಡ್ಸ್ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸ್ಥಳಗಳಲ್ಲಿ ಏಡ್ಸ್ ಜಾಗೃತಿ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಬೇಕು’ ಎಂದು ರೆಡ್‌ಕ್ರಾಸ್‌್ ಸಂಸ್ಥೆ ಸಂಸ್ಥೆ ವಿ.ಪಿ.ಸೋಮಶೇಖರ್ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಕೃಷ್ಣಪ್ಪ, ಇಸಿಒ ಆರ್.ಶ್ರೀನಿವಾಸನ್, ಶಿಕ್ಷಕ ಕೆಂಪೇಗೌಡ ಹಾಜರಿದ್ದರು.