ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಆವಕ: ಕುಸಿದ ಅವರೆ ಕಾಯಿ ಬೆಲೆ, ಬೆಳೆಗಾರರಿಗೆ ಸಂಕಷ್ಟ

ಒಂದು ಕೆ.ಜಿಗೆ ₹ 50ಕ್ಕೆ ಕುಸಿತ
Last Updated 15 ಜನವರಿ 2022, 7:50 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಮಾರುಕಟ್ಟೆಯಲ್ಲಿ ಶುಕ್ರವಾರ ಅವರೆ ಕಾಯಿ ಬೆಲೆ ಕುಸಿದಿದ್ದು, ರೈತರು ನಷ್ಟ ಅನುಭವಿಸಬೇಕಾಯಿತು. ಸಂಕ್ರಾಂತಿ ಹಬ್ಬಕ್ಕೆ ಒಳ್ಳೆಯ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಾಯಿ ತಂದಿದ್ದ ರೈತರು ದಿಢೀರ್ ಬೆಲೆ ಕುಸಿತದಿಂದ ಕಂಗಾಲಾದರು.

ಪ್ರಾರಂಭದಲ್ಲಿ ಅವರೆ ಕಾಯಿ ಬೆಲೆ ಕೆ.ಜಿಯೊಂದಕ್ಕೆ ₹ 80ರಂತೆ ಮಾರಾಟವಾಗುತ್ತಿತ್ತು. ಮಾರುಕಟ್ಟೆಗೆ ಕಾಯಿ ಅವಕ ಪ್ರಮಾಣ ಹೆಚ್ಚುತ್ತಿದ್ದಂತೆ ಒಂದು ಕೆ.ಜಿ ಕಾಯಿ ಬೆಲೆ ₹ 50ಕ್ಕೆ ಇಳಿಕೆಯಾಗಿತ್ತು. ತಾಲ್ಲೂಕಿನ ರೈತರು ಹಬ್ಬಕ್ಕೆ ಲಾಭದಾಯಕ ಬೆಲೆಯ ನಿರೀಕ್ಷೆಯಲ್ಲಿದ್ದರು. ಹಬ್ಬದ ಮುನ್ನಾ ದಿನವಾದ ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಸಾವಿರಾರು ಕ್ವಿಂಟಲ್ ಅವರೆ ಕಾಯಿ ಮಾರುಕಟ್ಟೆ ಪ್ರವೇಶಿಸಿತು.

ಆವಕದ ಪ್ರಮಾಣ ಹೆಚ್ಚುತ್ತಿದ್ದಂತೆ ಬೆಲೆ ಕುಸಿತ ಕಂಡಿತು. ಸಗಟು ಮಾರಾಟ ಬೆಲೆ ಕೆ.ಜಿಯೊಂದಕ್ಕೆ ₹ 30 ನಿಗದಿಯಾಯಿತು. ಮಧ್ಯಾಹ್ನವಾದರೂ ಮೂಟೆಗಟ್ಟಲೆ ಕಾಯಿ ಬರುತ್ತಲೇ ಇತ್ತು. ಇದರಿಂದ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಉಂಟಾಯಿತು.

ಚಿಲ್ಲರೆ ವ್ಯಾಪಾರಿಗಳು ಒಂದು ಕೆ.ಜಿಯೊಂದಕ್ಕೆ ₹ 35 ರಿಂದ ₹ 40 ರಂತೆ ಮಾರಾಟ ಮಾಡಿದರು. ಹಬ್ಬಕ್ಕೆ ಅವರೆ ಕಾಯಿ ಬೆಲೆ ದುಪ್ಪಟ್ಟಾಗುವ ನಿರೀಕ್ಷೆಯಲ್ಲಿದ್ದ ಅವರೆ ಪ್ರಿಯರು, ಬೆಲೆ ಕುಸಿತ ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಖುಷಿಯಾಗಿ ಖರೀದಿಸಿ ಕೊಂಡೊಯ್ದರು.

ರಾಜ್ಯದ ಬೇರೆ ಬೇರೆ ಮಾರುಕಟ್ಟೆಗಳು, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಅವರೆ ಕಾಯಿ ಖರೀದಿಗೆ ನೂರಾರು ವಾಹನಗಳು ಬಂದಿದ್ದವು. ಕಾಯಿ ತಂದಿದ್ದ ಹಾಗೂ ಹೊತ್ತೊಯ್ಯಲು ಬಂದಿದ್ದ ವಾಹನಗಳಿಂದಾಗಿ ಎಂ.ಜಿ. ರಸ್ತೆ ಹಾಗೂ ಚಿಂತಾಮಣಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿತ್ತು.

‘ಸದ್ಯದ ಬೆಲೆಯಲ್ಲಿ ಏನೂ ಗಿಟ್ಟುವುದಿಲ್ಲ. ಕಾಯಿ ಕೀಳುವ ಕೂಲಿ, ಚೀಲ, ಸಾಗಾಣಿಕೆ ವೆಚ್ಚ ಹಾಗೂ ಕಮಿಷನ್ ಕಳೆದರೆ ಕೈಗೆ ಬರುವುದು ಅಷ್ಟಕ್ಕಷ್ಟೇ. ಇಷ್ಟು ಕಡಿಮೆ ಬೆಲೆ ನಿರೀಕ್ಷಿಸಿರಲಿಲ್ಲ’ ಎಂದು ರೈತ ವೆಂಕಟರೆಡ್ಡಿ ಅಳಲುತೋಡಿಕೊಂಡರು.

‘ಮುಗಿದ ಟೊಮೆಟೊ ತೋಟಗಳಲ್ಲಿ ಯಥೇಚ್ಛವಾಗಿ ಅವರೆ ಕಾಯಿ ಬೆಳೆಯಲಾಗಿದೆ. ಹಬ್ಬದ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಯಿ ಕಿತ್ತು ಮಾರುಕಟ್ಟೆಯಲ್ಲಿ ಸುರಿಯಲಾಗಿದೆ. ಬೇಡಿಕೆಗಿಂತ ಆವಕದ ಪ್ರಮಾಣ ಹೆಚ್ಚಿದ್ದರಿಂದ ಬೆಲೆ ಕಡಿಮೆಯಾಯಿತು. ತೋಟಗಳಲ್ಲಿ ಬೆಳೆಯಲಾಗಿರುವ ಅವರೆ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದರೆ ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ’ ಎಂದು ವ್ಯಾಪಾರಿ ಅನ್ವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT