ಗುರುವಾರ , ನವೆಂಬರ್ 21, 2019
20 °C

ಮಕ್ಕಳಲ್ಲಿ ಕ್ರೀಡಾಸಕ್ತಿ ಕಡಿಮೆ: ಕ್ರೀಡಾಕೂಟದಲ್ಲಿ ಸಂಸದ ಮುನಿಸ್ವಾಮಿ ವಿಷಾದ

Published:
Updated:
Prajavani

ಕೋಲಾರ: ‘ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಗೆಲ್ಲುವ ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡರೆ ಖಂಡಿತ ಜಯ ಸಿಗುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಕ್ರೀಡಾಪಟುಗಳು ಉತ್ಸಾಹ ಕಳೆದುಕೊಳ್ಳಬಾರದು. ಯಾವಾಗಲೂ ಗೆಲ್ಲುವ ಹುಮ್ಮಸ್ಸು ಇರಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯು ಹಿಂದೆ ಕ್ರೀಡೆಗಳ ಸ್ವರ್ಗ ಎನಿಸಿಕೊಂಡಿತ್ತು. ಕಬಡ್ಡಿ, ಖೋ-ಖೋ ಸೇರಿದಂತೆ ಕ್ರೀಡೆ ನಡೆಯುತ್ತಿದ್ದವು. ಸಾಕಷ್ಟು ಮಂದಿ ಫುಟ್ಬಾಲ್‌ ಕ್ರೀಡಾಪಟುಗಳಿದ್ದರು. ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದವು. ಆದರೆ, ಇತ್ತೀಚೆಗೆ ಮಕ್ಕಳಲ್ಲಿ ಕ್ರೀಡಾಸಕ್ತಿ ಕಡಿಮೆಯಾಗಿದೆ’ ಎಂದು ವಿಷಾದಿಸಿದರು.

‘ಪಿ.ವಿ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದರು. ಅದೇ ರೀತಿ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಜಿಲ್ಲೆಗೆ ಕೀರ್ತಿ ತರಬೇಕು’ ಎಂದು ಆಶಿಸಿದರು.

‘ಮಕ್ಕಳು ಪೋಷಕರನ್ನು ಗೌರವಿಸಬೇಕು. ಪೋಷಕರು ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಲು ಕಷ್ಟಪಡುತ್ತಾರೆ. ಮಕ್ಕಳು ದೊಡ್ಡವರಾದ ಮೇಲೆ ಎಂದಿಗೂ ಪೋಷಕರನ್ನು ಮರೆಯಬಾರದು. ವಯೋವೃದ್ಧ ತಂದೆ ತಾಯಿಯನ್ನು ಪೋಷಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಹೆಚ್ಚಿದೆ. ನಗರ ಪ್ರದೇಶದ ಮಕ್ಕಳಂತೆಯೇ ಗ್ರಾಮೀಣ ಭಾಗದ ಮಕ್ಕಳೂ ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತೇನೆ’ ಎಂದು ಭರವಸೆ ನೀಡಿದರು.

ವಿದ್ಯಾವಂತರಾಗಿ: ‘ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಹಳ್ಳಿ ಮಕ್ಕಳು ಹತ್ತಾರು ಕಿ.ಮೀ ನಡೆದು ಹೋಗಿ ಪಟ್ಟಣದ ಶಾಲೆಗಳಲ್ಲಿ ಕಲಿಯಬೇಕಿತ್ತು. ಹಳ್ಳಿಯಲ್ಲಿ ಹುಟ್ಟಿದ ನಾನು ಪ್ರಾಥಮಿಕ ಶಾಲೆಗಾಗಿ ಒಂದೂವರೆ ಕಿ.ಮೀ ನಡೆದು ಹೋಗುತ್ತಿದ್ದ. ಪ್ರೌಢ ಶಾಲೆಗಾಗಿ ಕೋಲಾರಕ್ಕೆ 7 ಕಿ.ಮೀ ನಡೆದು ಬರುತ್ತಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಮ್ಮ ಬಾಲ್ಯ ಜೀವನ ನೆನಪಿಸಿಕೊಂಡರು.

‘ಈಗ ಬಸ್‌ ಸೌಕರ್ಯವಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿದೆ. ಮಕ್ಕಳು ಈ ಸೌಕರ್ಯ ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಬೇಕು. ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ’ ಎಂದು ಸಲಹೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶ್ರೀಶೈಲಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ನಟರಾಜ್, ಸಹ್ಯಾದ್ರಿ ವಿದ್ಯಾಸಂಸ್ಥೆ ಅಧ್ಯಕ್ಷ ಉದಯ್‌ಕುಮಾರ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚೌಡಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)