ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಲಸಿಕೆ ನೀಡಿಕೆ ಪ್ರಮಾಣ ಕುಂಠಿತ

Last Updated 10 ಸೆಪ್ಟೆಂಬರ್ 2021, 5:30 IST
ಅಕ್ಷರ ಗಾತ್ರ

ಕೆಜಿಎಫ್‌: ‘ಕೋವಿಡ್ ಲಸಿಕೆ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆ ಇರುವುದರಿಂದ ಕೆಜಿಎಫ್ ನಗರಕ್ಕೆ ಸರ್ಕಾರದಿಂದ ಬರುವ ಅನುದಾನ ಕುಂಠಿತವಾಗಬಹುದು. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ತಡವಾಗಬಹುದು. ಆದ್ದರಿಂದ ಕೂಡಲೇ ಎಲ್ಲಾ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರು ಲಸಿಕೆ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಬೇಕು’ ಎಂದು ನಗರಸಭೆ ಪೌರಾಯುಕ್ತ ನವೀನ್ ಚಂದ್ರ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಗುರುವಾರ ನಗರಸಭೆ ಸದಸ್ಯರು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದರು.

ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯಬೇಕು. ನಗರದಲ್ಲಿ ಮೂವತ್ತು ತಂಡಗಳನ್ನು ರಚಿಸಲು ಸಿದ್ಧವಿದ್ದೇವೆ. ಮುಂಜಾನೆ 6ಕ್ಕೆ ನಗರ ಬಿಟ್ಟು ರಾತ್ರಿ 9 ಗಂಟೆಗೆ ನಗರಕ್ಕೆ ಮರಳುವ ದಿನನಿತ್ಯ ಪ್ರಯಾಣಿಕರನ್ನು ಗುರ್ತಿಸಬೇಕು. ರಾತ್ರಿಯಾದರೂ ಸರಿ. ಅವರಿಗೆ ಲಸಿಕೆ ನೀಡಲು ತಂಡ ರಚಿಸುತ್ತೇವೆ ಎಂದರು.

ನಗರದಲ್ಲಿ ಸುಮಾರು 45 ಸಾವಿರ ಮಂದಿ ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ಬೇಸರಗೊಂಡಿದ್ದಾರೆ. ಲಸಿಕೆ ಇಲ್ಲ ಎಂದು ವಾಪಸ್ ಹೋಗಿರುವವರು, ತಪ್ಪು ಮಾಹಿತಿ ಪಡೆದು ಲಸಿಕೆ ಹಾಕಿಸಿಕೊಳ್ಳದೆ ಇರುವವರು, ರೋಗ ಪೀಡಿತರು ಮೊದಲಾದವರನ್ನು ಗುರ್ತಿಸಿ, ಅವರ ಮನವೊಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಸುನಿಲ್‌ ಮಾತನಾಡಿ, ಸರ್ಕಾರಿ ಸೌಲಭ್ಯ ಪಡೆಯಲು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂಬ ಸ್ಥಿತಿ ಬರಬಹುದು. ಪಡಿತರ ಅಂಗಡಿ ಬಳಿ ಕೂಡ ಲಸಿಕೆ ಕೇಂದ್ರ ಸ್ಥಾಪನೆ ಮಾಡುತ್ತೇವೆ. ಲಸಿಕೆ ಹಾಕಿಕೊಂಡ ನಂತರ ಪಡಿತರ ನೀಡುವ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಕುಡಿತದ ಹವ್ಯಾಸ ಇರುವವರು ಲಸಿಕೆ ತೆಗೆದುಕೊಂಡ ಒಂದು ದಿನ ಮಾತ್ರ ಕುಡಿಯದೆ ಇದ್ದರೆ ಸಾಕು. ಇನ್ನು ಮುಂದೆ ಮದ್ಯದ ಅಂಗಡಿಗಳಲ್ಲಿ ಲಸಿಕೆ ಹಾಕಿಸಿಕೊಂಡಿದ್ದರೆ ಮಾತ್ರ ಅವರಿಗೆ ಮದ್ಯ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.

‘ಪ್ರತಿ ವಾರ್ಡ್‌ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಡ್ಡಾಯ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಅಂತಹ ವಾರ್ಡ್‌ಗಳಲ್ಲಿ ಎಲ್ಲಾ ಜನತೆ ಲಸಿಕೆ ಹಾಕಿಸಿಕೊಂಡಿದ್ದರೆ ಅಂತಹ ಸದಸ್ಯನಿಗೆ ₹ 5 ಲಕ್ಷ ಬಹುಮಾನ ನೀಡಲಾಗುವುದು. ಪ್ರೇರೇಪಣೆ ನೀಡಿದ ಅಂಗನವಾಡಿ ಕಾರ್ಯಕರ್ತೆಗೆ ₹ 1 ಲಕ್ಷ ಬಹುಮಾನವನ್ನು ಸ್ವಂತ ಖರ್ಚಿನಿಂದ ನೀಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಪ್ರಕಟಿಸಿದರು.

ಕೋವಿಡ್ ಎರಡನೇ ಅಲೆ ಸೃಷ್ಟಿಸಿದ ಭೀಕರ ಸನ್ನಿವೇಶ ಇನ್ನೂ ಕಣ್ಣ ಮುಂದಿದೆ. ಹಲವಾರು ಸಾವುಗಳನ್ನು ನೋಡಿ ಕಣ್ಣಲ್ಲಿ ನೀರು ಬತ್ತಿ ಹೋಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT