ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಹಲ್ಲೆಕೋರರ ಬಂಧನಕ್ಕೆ ಆಗ್ರಹ

ಆಸ್ಪತ್ರೆಗೆ ಶಾಸಕರ ಭೇಟಿ: 7 ಮಂದಿ ವಿರುದ್ಧ ಪ್ರಕರಣ ದಾಖಲು
Last Updated 10 ಸೆಪ್ಟೆಂಬರ್ 2021, 5:21 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಆಗ್ರಹಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ತಾಲ್ಲೂಕಿನ ತಾಡಿಗೋಳ್ ಗ್ರಾಮದ ಸಮೀಪ ನಡೆದ ಘರ್ಷಣೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರು ಹಾಗೂ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದರು.

ಕೆಲವು ಪುಂಡರ ಗುಂಪು ಗೌರವಯುತವಾಗಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರ ಮೇಲೆ ವಿನಾಕಾರಣ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಪರಿಸ್ಥಿತಿ ಹೀಗಾದರೆ ದಲಿತ ಸಮುದಾಯಕ್ಕೆ ಸೇರಿದ ಹೆಣ್ಣು ಮಕ್ಕಳು ಶಾಲಾ, ಕಾಲೇಜಿಗೆ ಹೋಗು ವುದಾದರೂ ಹೇಗೆ, ಪೊಲೀಸರು ಸಕಾಲಿಕ ಕ್ರಮ ಕೈಗೊಳ್ಳಲು ಇನ್ನೇನು ನಡೆಯಬೇಕು ಎಂದು ಪ್ರಶ್ನಿಸಿದರು.

ಹಲ್ಲೆ ಘಟನೆ ನಡೆದು 4 ದಿನಗಳಾದರೂ, ಪರಿಚಿತ ಹಲ್ಲೆಕೋರರನ್ನು ಬಂಧಿಸಿಲ್ಲ. ಮೈಸೂರಿನ ಘಟನೆಯಲ್ಲಿ ಅಪರಿಚಿತ ಆರೋಪಿಗಳನ್ನು ಪೊಲೀಸರು ಸಲೀಸಾಗಿ ಹಿಡಿದರು. ಆದರೆ, ಇಲ್ಲಿ ಹಾಗೆ ಮಾಡಿಲ್ಲ. ಪೊಲೀಸರ ಕಾರ್ಯವೈಖರಿಯನ್ನು ಏನೆಂದು ತಿಳಿಯಬೇಕು ಎಂದರು.

‘ನಾನು ಖಾಕಿ ತೊಟ್ಟಿದ್ದರೆ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿರುವ ವ್ಯಕ್ತಿಗಳನ್ನು ಅರೆಬೆತ್ತಲೆಗೊಳಿಸಿ, ಬಾಸುಂಡೆ ಬರುವಂತೆ ಹೊಡೆದು ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಿದ್ದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆಗೆ ಒಳಗಾಗಿರುವ ವಿದ್ಯಾರ್ಥಿನಿಯರನ್ನೂ ಕೇಸಿನಲ್ಲಿ ಸೇರಿಸಿರುವುದು ದುರದೃಷ್ಟಕರ. ಇದು ಅವರನ್ನು ಹೆದರಿಸಿ, ಮೊಕದ್ದಮೆ ವಾಪಸ್ ಪಡೆಯುವಂತೆ ಮಾಡಲು ಮಾಡಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಎಸ್.ಎಂ. ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಸ್. ಆನಂದ್, ಡಿವೈಎಸ್ಪಿ ಕೆ.ಸಿ. ಗಿರಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಸಿ. ವಿಜಯ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶ್ ಇದ್ದರು.

ಪ್ರತಿಭಟನೆ: ಘಟನೆ ಖಂಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಹಲ್ಲೆಗೊಳಗಾಗಿರುವ ವಿದ್ಯಾರ್ಥಿನಿಯರು ಹಾಗೂ ಅವರ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು. ಜಿಮ್ ಅನಿಲ್ ಮತ್ತು ಆತನ ಸಹಚರರನ್ನು ಗಡಿಪಾರು ಮಾಡಬೇಕು. ದಲಿತರ ಮೇಲೆ ದೌರ್ಜನ್ಯ ಕಾಯ್ದೆಯಡಿ ನಿಯಮಿತವಾಗಿ ಸಭೆ ನಡೆಸಬೇಕು. ಇಂಥ ಘಟನೆಗಳು ಸಂಭವಿಸಿದಾಗ ಕೇಸ್ ಮತ್ತು ಕೌಂಟರ್ ಕೇಸ್ ದಾಖಲಿಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಸುಗುಣಮ್ಮ, ಪಿಳ್ಳರಾಜು ಬೋಸಪ್ಪ, ಹಿಂಡ್ಲವಾಡಿ ಬಸವರಾಜ್, ಡಿ.ಎಂ. ಅಂಬರೀಶ್, ಎಂ. ಪಾಪಣ್ಣ, ಎಂ. ನಾಗೇಶ್, ರವಿ ಯಾದವ್, ವೆಂಕಟೇಶ್, ರಾಮಾಪುರ ಮುನಿರಾಜುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT