ಶುಕ್ರವಾರ, ನವೆಂಬರ್ 22, 2019
27 °C
ಕೋಚಿಮುಲ್ ವಾರ್ಷಿಕ ಸಾಮಾನ್ಯ ಸಭೆ: ಶಿಸ್ತುಕ್ರಮದ ಭರವಸೆ

ಅಮಾನತಿಗೆ ಆಗ್ರಹ: ಸಭೆಯಲ್ಲಿ ಗೊಂದಲ

Published:
Updated:
Prajavani

ಕೋಲಾರ: ‘ಕೋಚಿಮುಲ್‌ ಆಡಳಿತ ವಿಭಾಗದ ವ್ಯವಸ್ಥಾಪಕ ನಾಗೇಶ್‌ ಅನುಚಿತವಾಗಿ ವರ್ತಿಸಿದ್ದು, ಅವರನ್ನು ಅಮಾನತು ಮಾಡಬೇಕು’ ಎಂದು ಹಾಲು ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಆಗ್ರಹಿಸಿದ್ದರಿಂದ ಕೋಚಿಮುಲ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು.

ಇಲ್ಲಿ ಗುರುವಾರ ನಡೆದ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಸದಸ್ಯರ ಸಭೆಯಲ್ಲಿ ವಿವಿಧ ಸಂಘಗಳ ಅಧ್ಯಕ್ಷರಾದ ನರಸಿಂಹರೆಡ್ಡಿ, ಶ್ರೀರಾಮ್ ಮತ್ತು ವೆಂಕಟೇಶಪ್ಪ ಮಾತನಾಡಿ, ‘ಒಕ್ಕೂಟದ ಕಚೇರಿಗೆ ಕರೆ ಮಾಡಿದಾಗ ನಾಗೇಶ್ ಏಕ ವಚನದಲ್ಲಿ ಮಾತನಾಡಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ, ‘ನಾಗೇಶ್‌ ವಿರುದ್ಧ ಲಿಖಿತ ದೂರು ನೀಡಿ. ಮಂಡಳಿ ಸಭೆಯಲ್ಲಿ ಚರ್ಚಿಸಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಭರವಸೆ ನೀಡಿದರು. ಇದಕ್ಕೆ ಅಸಮಾಧಾನಗೊಂಡ ಸಂಘಗಳ ಅಧ್ಯಕ್ಷರು, ‘ನಾಗೇಶ್‌ರನ್ನು ರಕ್ಷಿಸಲು ಯತ್ನಿಸುತ್ತಿದ್ದೀರಿ. ಇದು ಸರಿಯಲ್ಲ’ ಎಂದು ಕಿಡಿಕಾರಿದರು.

‘ಬೆಣ್ಣೆ ಮತ್ತು ತುಪ್ಪ ದಾಸ್ತಾನು ಪುಸ್ತಕ ಹಾಗೂ ಭೌತಿಕ ದಾಸ್ತಾನಿನ ವ್ಯತ್ಯಾಸದ ಮೊತ್ತ ₹ 20.88 ಲಕ್ಷ, ತುಪ್ಪದ ಮೊತ್ತ ₹ 39 ಸಾವಿರ ವಸೂಲು ಮಾಡದೆ ವಿನಾಕಾರಣ ಮಾಡಲಾಗುತ್ತಿದೆ’ ಎಂದು ಕುರುಗಲ್‌ ಹಾಲು ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶಪ್ಪ ದೂರಿದರು.

‘ಸಂಘದಿಂದ ಒಕ್ಕೂಟಕ್ಕೆ ಯಾವುದಾದರೂ ಹಣ ಬರಬೇಕಿದ್ದರೆ ಕೂಡಲೇ ವಸೂಲಿ ಮಾಡುತ್ತೀರಿ. ಸಭೆಗೆ ಬಂದಿರುವ ಅಧ್ಯಕ್ಷರಿಗೆ ಮೂರು ಕಾಸಿನ ಬ್ಯಾಗ್‌ ಕೊಟ್ಟಿದ್ದೀರಾ. ಆದರೆ, ಕೋಚಿಮುಲ್‌ ನಿರ್ದೇಶಕರಿಗೆ ₹ 10 ಸಾವಿರ ಬೆಲೆ ಬಾಳುವ ನೆನಪಿನ ಕಾಣಿಕೆ ನೀಡಲಾಗಿದೆ. ಸಂಘಗಳು ಅಧ್ಯಕ್ಷರನ್ನು ಏಕೆ ಕಡೆಗಣಿಸಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ವಿ.ತಿಪ್ಪಾರೆಡ್ಡಿ ವಿರುದ್ಧ ಆಕ್ರೋಶಗೊಂಡ ವೆಂಕಟೇಶಪ್ಪ, ‘ನಿಮಗೆ ಲಗ್ಸುರಿ ಸೌಕರ್ಯಗಳಿವೆ. ನಮಗೆ ಇಲ್ಲಿ ಏನು ಗೌರವವಿದೆ ಎಂಬುದಕ್ಕೆ ಅಧ್ಯಕ್ಷರೇ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟ ವಿಭಜಿಸಿ: ‘ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 12 ವರ್ಷಗಳಾಗಿವೆ. ಹಾಲು ಒಕ್ಕೂಟ ವಿಭಜನೆ ಮಾಡಬೇಕೆಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಇದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರು ಧ್ವನಿ ಎತ್ತದಿರುವುದು ದುರಂತ’ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಸಹಕಾರ ಸಂಘಗಳ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.

ಆಗ ನಂಜೇಗೌಡ, ‘ವಿಭಜನೆ ಮಾಡಲು ಮಾಡಲು ಒಕ್ಕೂಟ ಸಾಲದಲ್ಲಿದೆ. ಈ ಸಾಲ ತೀರಿಸುವವರು ಯಾರು? ಒಕ್ಕೂಟದ ವಿಭಜನೆ ಸಂಬಂಧ ಆಡಳಿತ ಮಂಡಳಿಯ ತೀರ್ಮಾನದಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ವಿಭಜನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಗೊಬ್ಬರ ಘಟಕ: ‘ಹಸುಗಳಿಗೆ ವರ್ಷಕ್ಕೆ 2 ಬಾರಿ ವಿಮೆ ಮಾಡಿಲು ಅವಕಾಶ ಕಲ್ಪಿಸಬೇಕು. ಹಸುವಿನ ಸಗಣಿ ಮತ್ತು ಗಂಜಲವನ್ನು ಜೀವಾಮೃತ ಗೊಬ್ಬರ ಮತ್ತು ಔಷಧಿಯಾಗಿ ಬಳಕೆ ಮಾಡುತ್ತಾರೆ. ಒಕ್ಕೂಟದ ವತಿಯಿಂದ ಜೀವಾಮೃತ ಗೊಬ್ಬರ ಘಟಕ ಸ್ಥಾಪಿಸಿದರೆ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ’ ಎಂದು ವಕ್ಕಲೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಚೌಡೇಶ್ವರಿ ಸಲಹೆ ನೀಡಿದರು.

‘ಕರ್ನಾಟಕ ಹಾಲು ಮಹಾಮಂಡಳ ಉತ್ಪಾದಿಸಿರುವ ಅರ್ಧ ಲೀಟರ್ ನೀರಿನ ಬಾಟಲಿ ಬೆಲೆ ₹ 10 ಇದೆ. ಇಲ್ಲಿ ನೀರಿಗೆ ಇರುವ ಬೆಲೆ ಹಾಲಿಗೆ ಇಲ್ಲವಾಗಿದೆ’ ಎಂದು ಚಿಕ್ಕನಹಳ್ಳಿ ಸಂಘದ ಉಪಾಧ್ಯಕ್ಷ ಸಿ.ಅಮರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಅತ್ಯುತ್ತಮ ಹಾಲು ಸಹಕಾರ ಸಂಘಗಳನ್ನು ಪ್ರಶಂಶಿಸಲಾಯಿತು. ಕೋಚಿಮುಲ್‌ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ವೈ.ಬಿ.ಅಶ್ವತ್ಥನಾರಾಯಣ, ಕೆ.ಅಶ್ವಥ್‌ರೆಡ್ಡಿ, ಡಿ.ವಿ.ಹರೀಶ್, ಹನುಮೇಶ್, ಕೆ.ಎನ್.ನಾಗರಾಜ್, ಜೆ.ಕಾಂತರಾಜ್, ವಿ.ಮಂಜುನಾಥ್‌ರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)