ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನ ಆಯೋಗ ರಚನೆಗೆ ಆಂದೋಲನ

Last Updated 21 ಜನವರಿ 2019, 16:07 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಯುವಜನ ಆಯೋಗ ರಚಿಸುವಂತೆ ಒತ್ತಾಯಿಸಿ ಸಂಘಟನೆ ವತಿಯಿಂದ ರಾಜ್ಯದೆಲ್ಲೆಡೆ ಆಂದೋಲನ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಯುವ ಜನರ ಯುವ ಮುನ್ನಡೆ ಸಂಘಟನೆ ಸದಸ್ಯ ರಿಯಾಜ್‌ ಮನವಿ ಮಾಡಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶ ಮತ್ತು ರಾಜ್ಯದಲ್ಲಿ ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗೆ ಆಯೋಗಗಳಿವೆ. ಇದೇ ರೀತಿ ಯುವಕರ ಅಭಿವೃದ್ಧಿ, ರಕ್ಷಣೆಗಾಗಿ ಕೇರಳ ರಾಜ್ಯದಲ್ಲಿ ಯುವಜನ ಆಯೋಗ ರಚಿಸಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಆಯೋಗ ರಚಿಸಬೇಕು’ ಎಂದರು.

‘ಆಂದೋಲನದ ಭಾಗವಾಗಿ ಫೆ.9ರಂದು ‘ಯೂತ್ ಅವರ್’, ಫೆ.16ರಿಂದ 18ರವರೆಗೆ ‘ಯುವಜನ ಹಕ್ಕಿನ ಮೇಳ’ ಹಾಗೂ ಫೆ.18ರಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ವಿವರಿಸಿದರು.

‘ಯುವಕ ಯುವತಿಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಲವು ಸಮಸ್ಯೆಗಳಿವೆ. ದುಡಿಯುವ ಸ್ಥಳದಲ್ಲಿ ಜಾತಿ, ಧರ್ಮದ ಕಾರಣಕ್ಕೆ ಯುವಕರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅಲ್ಪಸಂಖ್ಯಾತ ಯುವಕರು ಸಾಂಪ್ರದಾಯಿಕ ಸಂಸ್ಕೃತಿ ಪ್ರತಿಪಾದಕರಿಂದ ಅವಮಾನಿತರಾಗುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಕ್ಷಣೆ ಇಲ್ಲವಾಗಿದೆ: ‘ಚೀನಾದಲ್ಲಿ ಅತಿ ಹೆಚ್ಚು ಯುವಕರು ಇರುವುದರಿಂದ ಆ ದೇಶ ಅಭಿವೃದ್ಧಿಯಾಗುತ್ತಿದೆ. ಇಡೀ ವಿಶ್ವವೇ ಆ ದೇಶದತ್ತ ತಿರುಗಿ ನೋಡುತ್ತಿದೆ’ ಎಂದು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ಅಭಿಪ್ರಾಯಪಟ್ಟರು.

‘ದೇಶದಲ್ಲಿ ಶೇ 70ರಷ್ಟು ಯುವ ಶಕ್ತಿ ಇದ್ದರೂ ರಕ್ಷಣೆ ಇಲ್ಲವಾಗಿದೆ. ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕಲ್ಪಿಸಲಾಗಿದೆ. ಆದರೆ, ಇದು ಸಮರ್ಪಕವಾಗಿ ಸಾಕಾರಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯುವಕರ ಸಮಸ್ಯೆ ಸವಾಲುಗಳಿಗೆ ನೆಲೆಯಾಗಿ ಯುವ ಜನ ಹಕ್ಕುಗಳಿದ್ದರೂ ಸಾಕಾರಗೊಳ್ಳುತ್ತಿಲ್ಲ. ಇದಕ್ಕಾಗಿಯೇ ಯುವಜನ ಆಯೋಗ ಸ್ಥಾಪನೆ ಕೂಗು ಆಂದೋಲನವಾಗಿದೆ. ಆಯೋಗ ರಚನೆಯಾದರೆ ಹಕ್ಕುಗಳ ಅನುಷ್ಠಾನ ಮತ್ತು ಮಧ್ಯಸ್ಥಿಕೆಯಾಗಿ ಕೆಲಸ ಮಾಡುವ ಸರ್ಕಾರಿ ವ್ಯವಸ್ಥೆಯು ನಿರ್ಮಾಣವಾಗುತ್ತದೆ’ ಎಂದರು.

ಸಂಘಟನೆ ಸದಸ್ಯರಾದ ಅರವಿಂದ್, ಸುನಿತಾ, ಮಧುಸೂದನ್, ಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT