ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ಒತ್ತುವರಿ ತೆರವುಗೊಳಿಸಲು ಆಗ್ರಹ

ರೈತ ಸಂಘದ ಸದಸ್ಯರ ಪ್ರತಿಭಟನೆ
Last Updated 23 ಜೂನ್ 2022, 4:17 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದಾದ್ಯಂತ ಒತ್ತುವರಿಯಾಗಿರುವ ರಾಜಕಾಲುವೆ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಪುರಸಭೆ ಮುಂಭಾಗಪ್ರತಿಭಟನೆ ನಡೆಸಿದರು.

ಪಟ್ಟಣದ ಹಲವೆಡೆ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರು ಮನೆ ಗಳಿಗೆ ನುಗ್ಗುತ್ತಿದೆ. ಮುಂದೆ ಮಹಾಮಳೆ ಆಗುವ ಸಂಭವ ಇದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಭಾವಿಗಳ ಒತ್ತಡಕ್ಕೆ ಮಣಿದು ರಾಜಕಾಲುವೆಗಳ ಮೇಲೆ ನಿರ್ಮಿಸಿರುವ ವಾಣಿಜ್ಯ ಮಳಿಗೆ ಹಾಗೂ ಕಲ್ಯಾಣ ಮಂಟಪಗಳನ್ನು ತೆರವುಗೊಳಿಸುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳು ಬಡವರ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಆರೋಪಿಸಿದರು.

ವರ್ಷಕ್ಕೊಂದು ಬಾರಿ ನೆಪಮಾತ್ರಕ್ಕೆ ಪ್ಲಾಸ್ಟಿಕ್ ಕಸ ವಿಲೇವಾರಿ ಮಾಡಿ ಪ್ಲಾಸ್ಟಿಕ್ ವಿರೋಧಿ ದಿನಾಚರಣೆ ಮಾಡಲಾಗು ತ್ತಿದೆ. ಆದರೆ, ಸಂಪೂರ್ಣವಾಗಿ ಕಸ ವಿಲೇವಾರಿ ಮಾಡುವಲ್ಲಿ ಪುರಸಭೆ ವಿಫಲವಾಗಿದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅನುದಾನ ದುರ್ಬಳಕೆ: 14-15ನೇ ಹಣಕಾಸು ಅನುದಾನ ದುರ್ಬಳಕೆಯಾಗಿದೆ. ಪಟ್ಟಣ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿ ಕಾರದ ಬಿಡುಗಡೆಯಾಗಿದ್ದ ಅನುದಾನ ದಲ್ಲಿ ಭ್ರಷ್ಟಾಚಾರ ನಡೆದಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ ಆಗ್ರಹಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನರಹಿತ ಬಡ ಕೂಲಿ ಕಾರ್ಮಿಕರಿಗೆ ಸಿಗಬೇಕಾದ ಜಮೀನು ಇಂದು ರಾಜಕಾರಣಿಗಳು ಹಾಗೂ ಬಲಾಢ್ಯರಿಗೆ ಮಂಜೂರಾಗಿದೆ. ಅಲ್ಲದೆ ಅಕ್ರಮವಾಗಿ ಇ-ಖಾತೆ ಮಾಡಿಸುವ ಮೂಲಕ ಕೋಟಿಗಟ್ಟಲೆ ಲೂಟಿ ಮಾಡಲಾಗುತ್ತಿದೆ ಎಂದರು.

ಪಟ್ಟಣದ ಸರ್ವೆ ನಂಬರ್ 4/1 ರಿಂದ 4/8 ರವರೆಗೆ ಅಕ್ರಮ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆ ಮಳಿಗೆಗಳಿಗೆ ತೆರಿಗೆ ನೀಡದೆ ವಂಚನೆ ಮಾಡಿರುವ ಬಗ್ಗೆ ನೋಟಿಸ್ ನೀಡಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.

ಬಲಾಢ್ಯರು ಯಾವುದೇ ಪರವಾನಗಿ ಇಲ್ಲದೆ, ರಾಜಾರೋಷವಾಗಿ ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ಅಕ್ರಮ ಕಲ್ಯಾಣ ಮಂಟಪಗಳನ್ನು ನಿರ್ಮಿಸುತ್ತಿದ್ದರೂ ಅವರಿಗೆ ಕನಿಷ್ಠ ಪಕ್ಷ ನೋಟಿಸ್ ನೀಡುತ್ತಿಲ್ಲ ಎಂದು ದೂರಿದರು.

ವಾರದ ಒಳಗೆ ಸಮಸ್ಯೆಗಳನ್ನು ನಿವಾರಿಸಬೇಕು. ಪುರಸಭೆ ಕಚೇರಿ ಯನ್ನು ಭ್ರಷ್ಟಾಚಾರ ಮುಕ್ತ ಕಚೇರಿ ಯನ್ನಾಗಿ ಮಾಡಬೇಕು. ಕ್ರಮ ಕೈಗೊಳ್ಳ ದಿದ್ದರೆ ಬುಡ್ಡಿದೀಪಗಳೊಂದಿಗೆ ನಗರಾ ಭಿವೃದ್ಧಿ ಸಚಿವರ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಚಲಪತಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಮರಗಲ್ ಮುನಿಯಪ್ಪ, ಆಂಜಿ, ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಕಿರಣ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಎ. ನಳಿನಿಗೌಡ, ಚಾಂದ್ಪಾಷ, ಚಲಪತಿ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಕೆಜಿಎಫ್ ಸಂದೀಪ್‌ ಗೌಡ, ಸಂದೀಪ್‌ ರೆಡ್ಡಿ, ಮುನಿಕೃಷ್ಣ, ಅನಿಲ್, ತೆರ್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಪುತ್ತೇರಿ ರಾಜು, ಬಾಬಾ ಜಾನ್, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT