ಗುರುವಾರ , ನವೆಂಬರ್ 21, 2019
23 °C
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಕಿವಿಮಾತು

ಮಕ್ಕಳಲ್ಲಿ ದೇಸಿ ಸಂಸ್ಕೃತಿ ಬೆಳೆಸಿ

Published:
Updated:
Prajavani

ಕೋಲಾರ: ‘ಮೊಬೈಲ್ ಹಾಗೂ ಟಿ.ವಿಯ ಸಾಮೂಹಿಕ ಸನ್ನಿಯಿಂದ ಮಕ್ಕಳನ್ನು ದೂರ ಮಾಡಬೇಕು. ಜತೆಗೆ ಮಕ್ಕಳಲ್ಲಿ ದೇಸಿ ಸಂಸ್ಕೃತಿ ಬೆಳೆಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಕಿವಿಮಾತು ಹೇಳಿದರು.

ಮಾಲೂರಿನ ಗುರುಕೃಪ ಸಂಗೀತ ಕಲಾವೃಂದ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿ, ‘ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳತ್ತ ಸೆಳೆಯುವ ಮೂಲಕ ಕಲೆ, ಸಂಸ್ಕೃತಿಯ ಮಹತ್ವ ತಿಳಿಸಿಕೊಡಬೇಕು’ ಎಂದರು.

‘ನಾಡು, ನುಡಿ, ಕಲೆ, ಸಂಸ್ಕೃತಿಯ ವೈವಿಧ್ಯತೆ ಸಾರುವಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ರೂಪಿಸಿ ಮಕ್ಕಳಿಗೆ ದೇಸಿ ಕಲೆಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಜನಪದ, ಸುಗಮ ಸಂಗೀತ, ಶಾಸ್ತ್ರಿಯ ಸಂಗೀತ, ಕರ್ನಾಟಕ ಸಂಗೀತದಂತಹ ಕಲಾ ಪ್ರಕಾರಗಳನ್ನು ಪೋಷಿಸಬೇಕು. ಇದರಿಂದ ಬುದ್ಧಿ ವಿಕಸನವಾಗುತ್ತದೆ. ಆಧುನಿಕತೆಯ ದಾಳಿಯಿಂದ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಲೆಗಳು ಕಣ್ಮರೆಯಾಗುತ್ತಿವೆ’ ಎಂದು ವಿಷಾದಿಸಿದರು.

‘ಟಿ.ವಿ, ಮೊಬೈಲ್‌ ಹಾಗೂ ಇಂಟರ್‌ನೆಟ್‌ ಪ್ರಭಾವದಿಂದ ಜನಪದ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಮಕ್ಕಳು ತಪ್ಪು ದಾರಿ ಹಿಡಿಯುತ್ತಿದ್ದಾರೆ. ಅವರನ್ನು ಸಾಂಸ್ಕೃತಿಕ ಚಟುವಟಿಕೆಗಳಿಂದ ಆಕರ್ಷಿಸಿ ಸರಿ ದಾರಿಗೆ ತರಬೇಕು. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಪರಿಷತ್ತು ಕಾರ್ಯಕ್ರಮಗಳನ್ನು ರೂಪಿಸಲಿದೆ’ ಎಂದು ತಿಳಿಸಿದರು.

ಒಳ್ಳೆಯ ಬೆಳವಣಿಗೆ: ‘ಕಲಾ ಕ್ಷೇತ್ರಗಳಲ್ಲಿ ವೈವಿಧ್ಯತೆ ಹೊಂದಿರುವ ಗುರುಗಳು ಪ್ರತಿಭಾವಂತ ಶಿಷ್ಯರನ್ನು ಹುಟ್ಟು ಹಾಕಿ ಸಮಾಜ ಗುರುತಿಸುವಂತೆ ಮಾಡಿರುವುದು ಶ್ಲಾಘನೀಯ. ಆದರೆ, ಸಮಾಜವು ಗುರುಗಳನ್ನು ಗೌರವಿಸುವುದನ್ನೇ ಮರೆಯುತ್ತಿದೆ’ ಎಂದು ಭಾರತ ಸೇವಾ ದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್‌ ಕಳವಳ ವ್ಯಕ್ತಪಡಿಸಿದರು.

‘ಕಲೆ ದೈವದತ್ತವಾಗಿ ಬಂದಿದೆಯಾದರೂ ನಿರಂತರ ಅಭ್ಯಾಸ ಮಾಡಬೇಕು. ಭರತ ನಾಟ್ಯವು ದೇವಲೋಕದ ಕಲೆಯೆಂಬ ಭಾವನೆ ಹೋಗಿ ಪಕ್ಕದ ಮನೆಯ ಕಲೆಯಂತೆ ಆಗಿದೆ. ಕಲೆ ಯಾರೊಬ್ಬರ ಸ್ವತ್ತಲ್ಲ. ಶಿಕ್ಷಣವನ್ನೂ ಇಂತಹವರೆ ಕಲಿಯಬೇಕೆಂಬ ಕಂದಾಚಾರ ಅಳಿಸುವ ಮೂಲಕ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಲೆಗಳು ಜಾತ್ಯಾತೀತವಾಗಿ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೌಲ್ಯ ಬೆಳೆಸಿಕೊಳ್ಳಿ: ‘ಉನ್ನತ ಶಿಕ್ಷಣಕ್ಕೆ ಪಡುವಷ್ಟೇ ಶ್ರಮ ಸಾಂಸ್ಕೃತಕ ಕಲೆಗಳ ಅಭ್ಯಾಸಕ್ಕೂ ಅಗತ್ಯ. ಸಂಗೀತ ಕಲೆಯಿಂದ ಉಚ್ಛಾರಣೆ, ಸ್ವರವು ಗುಣ ಮಟ್ಟದಿಂದ ಕೊಡಿರುತ್ತದೆ. ಸಾಂಸ್ಕೃತಿಕ ಕಲೆ ಜತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ’ ಎಂದು ಸಂಗೀತ ಕಲಾವಿದ ಕಿರಣ್ ಸೋಮಣ್ಣ ಸಲಹೆ ನೀಡಿದರು.

ಕಲಾ ಪ್ರದರ್ಶನ ನೀಡಿದ ಪ್ರತಿಭೆಗಳಿಗೆ ಪ್ರಶಸ್ತಿಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು. ಸಂಗೀತ ಶಿಕ್ಷಕ ನಾರಾಯಣಸ್ವಾಮಿ, ಭರತ ನಾಟ್ಯ ಕಲಾವಿದ ರಮೇಶ್‌, ಕಲಾವಿದರಾದ ಜನ್ನಘಟ್ಟ ಕೃಷ್ಣಮೂರ್ತಿ, ಶಿವಣ್ಣ, ನಟರಾಜ್, ಮದ್ದೇರಿ ಮುನಿರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)