ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಿ

Last Updated 21 ಆಗಸ್ಟ್ 2019, 14:34 IST
ಅಕ್ಷರ ಗಾತ್ರ

ಕೋಲಾರ: ‘ಪ್ರತಿಭಾ ಕಾರಂಜಿ ಸ್ಪರ್ಧೆಯು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪ್ರದೀಪ್‌ಕುಮಾರ್ ಅಭಿಪ್ರಾಯಪಟ್ಟರು.

ಶಾಲೆಯಲ್ಲಿ ಬುಧವಾರ ನಡೆದ ಕ್ಲಸ್ಟರ್ ಹಂತದ ಪ್ರೌಢ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿ, ‘ಮಕ್ಕಳು ಮಾಡುವ ಕಲೆಯಿಂದಲೇ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮುಂದುವರಿಯಲು ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.

‘ಬುದ್ಧ -ಅಂಗೂಲಿ ಮಾಲ ನಾಟಕದಲ್ಲಿ ಡಕಾಯಿತನ ಮನ:ಪರಿವರ್ತನೆ ಕಥೆಯನ್ನು ಪ್ರದರ್ಶಿಸಿದ ಮಕ್ಕಳ ಪ್ರತಿಭೆ ಶ್ಲಾಘನೀಯ. ನಾಟಕದ ಕಥೆಯು ಮಕ್ಕಳಲ್ಲಿ ಮೌಲ್ಯ ತುಂಬುವ ಪ್ರಯತ್ನ ಮಾಡಿದೆ. ಮಕ್ಕಳು ಬುದ್ಧ, ಅಂಗೂಲಿಮಾಲ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೂ ಅವರಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸುವುದು ಮುಖ್ಯ. ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಬೇಕು. ಮಕ್ಕಳು ಪರಿಸರ ಉಳಿಸುವ ಸಂಕಲ್ಪ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಪಠ್ಯೇತರ ಚಟುವಟಿಕೆ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕ ಗಳಿಕೆಯೇ ಮುಖ್ಯವಾಗಿದೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚುತ್ತಿದೆ. ಮಕ್ಕಳು ಪಠ್ಯ ವಿಷಯಕ್ಕಷ್ಟೇ ಸೀಮಿತವಾಗದೆ ಕ್ರೀಡೆ, ಸಂಗೀತ, ನೃತ್ಯದಂತಹ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು’ ಎಂದು ತ್ಯಾವನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಾಚಾರಿ ತಿಳಿಸಿದರು.

ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಉಪಾಧ್ಯಕ್ಷೆ ಹೇಮಾವತಿ, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಸೌಮ್ಯ, ಶಿಕ್ಷಕರಾದ ವೆಂಕಟಶಾಮಿರೆಡ್ಡಿ, ಸಿ.ಎಲ್.ಶ್ರೀನಿವಾಸಲು, ಡಿ.ಚಂದ್ರಶೇಖರ್, ವಸಂತಮ್ಮ, ನೇತ್ರಾವತಿ, ದಾಕ್ಷಾಯಿಣಿ, ಜಮುನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT