ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಿ

Last Updated 13 ಫೆಬ್ರುವರಿ 2019, 14:18 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳಿಗೆ ವಿದ್ಯಾರ್ಥಿ ದಿಸೆಯಿಂದಲೇ ನೈತಿಕ ಮತ್ತು ಸಾಮಾಜಿಕ ಮೌಲ್ಯ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ರಾಜ್ಯ ಸರ್ಕಾರದ ನಿವೃತ್ತ ಅಧೀನ ಕಾರ್ಯದರ್ಶಿ ಇ.ರಾಮಕೃಷ್ಣಪ್ಪ ತಿಳಿಸಿದರು.

ಬೆಂಗಳೂರಿನ ಹೆಡ್ ಸ್ಟ್ರೀಮ್ಸ್ ಸಂಸ್ಥೆಯು ತಾಲ್ಲೂಕಿನ ಹರಟಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳಿಗೆ ಇಂಗ್ಲಿಷ್ ವಿಷಯಾಧಾರಿತ ಶಿಕ್ಷಣ ನೀಡುವುದರಿಂದ ಭಾಷಾ ಜ್ಞಾನ ವೃದ್ಧಿಯಾಗುತ್ತದೆ’ ಎಂದು ಹೇಳಿದರು.

‘ಕಲಿಕೆಯ ಜತೆಗೆ ಮಕ್ಕಳಿಗೆ ನಾಟಕ ಅಭಿನಯ ಕಲಿಸುವುದರಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಬಹುದು. ಮಕ್ಕಳಿಗೆ ಪಠ್ಯ ಭೋದನೆ ಜತೆಗೆ ಕ್ರೀಡೆ ಮತ್ತು ಸಾಹಿತ್ಯಾಭಿರುಚಿ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದೆಂಬ ಸಂಕಲ್ಪ ಮಾಡಬೇಕು’ ಎಂದು ನಾಟಕ ಪ್ರದರ್ಶನದ ಸಂಯೋಜಕ ಅಂಬರೀಶ್ ಸಲಹೆ ನೀಡಿದರು.

ಅಭಿವೃದ್ಧಿಗೆ ಶ್ರಮಿಸಿ: ‘ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಚ್.ಎಂ.ಮಂಜುಳಾ ಕಿವಿಮಾತು ಹೇಳಿದರು.

‘ಗ್ರಾಮೀಣ ಭಾಗದ ಮಕ್ಕಳು ಕಲಿಕೆಗೆ ಮಾತ್ರ ಸೀಮಿತಗೊಂಡಿದ್ದಾರೆ. ಅವರ ಪ್ರತಿಭೆ ಗುರುತಿಸಲು ಸೂಕ್ತ ವೇದಿಕೆ ಸಿಗುತ್ತಿಲ್ಲ. ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಪ್ರತಿಭಾವಂತರಾಗಿದ್ದಾರೆ. ಶಿಕ್ಷಕರು ಈ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಬೇಕು’ ಎಂದು ಹೇಳಿದರು.

ತತ್ವಾದರ್ಶ ಮೈಗೂಡಿಸಿಕೊಳ್ಳಿ: ‘ವಿದ್ಯಾರ್ಥಿಗಳು ಬುದ್ಧ, ಬಸವ, ಅಂಬೇಡ್ಕರ್‌ ಅವರಂತಹ ಮಹನೀಯರ ಜೀವನ ಚರಿತ್ರೆ ಓದುವುದರ ಜತೆಗೆ ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಮಕ್ಕಳ ಕಲಿಕೆಯ ಮೇಲೆ ಪೋಷಕರು ಹೆಚ್ಚು ನಿಗಾ ವಹಿಸಬೇಕು’ ಎಂದು ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್ ಸಲಹೆ ನೀಡಿದರು.

ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್, ಆನಂದ್‌ಕುಮಾರ್, ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಚ್.ಗೋವಿಂದಪ್ಪ, ಆರ್.ಮಂಜುಳಾ, ಕೆ.ಮಮತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT