ಸಂಶೋಧನೆ ಅಭಿರುಚಿ ಬೆಳೆಸಿಕೊಳ್ಳಿ

ಶನಿವಾರ, ಏಪ್ರಿಲ್ 20, 2019
29 °C

ಸಂಶೋಧನೆ ಅಭಿರುಚಿ ಬೆಳೆಸಿಕೊಳ್ಳಿ

Published:
Updated:
Prajavani

ಕೋಲಾರ: ‘ವಿದ್ಯಾರ್ಥಿಗಳು ಪಠ್ಯವಿಷಯ ಮತ್ತು ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ಸಂಶೋಧನೆ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಕಿವಿಮಾತು ಹೇಳಿದರು.

ಸಂಶೋಧನೆ ಕುರಿತು ನಗರದ ಎಸ್‌ಡಿಸಿ ಪದವಿ ಕಾಲೇಜಿನಲ್ಲಿ ಬಿಬಿಎ, ಎಂ.ಕಾಂ ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ, ಆಸಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾರ್ಯಾಗಾರ ಆಯೋಜಿಸಿ ಗ್ರಾಮೀಣ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಶಕ್ತಗೊಳಿಸುತ್ತೇವೆ. ಜತೆಗೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುತ್ತೇವೆ. ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮತ ಹಾಕಬೇಕು. ಹಣ, ಹೆಂಡದ ಆಮಿಷಕ್ಕೆ ಬಲಿಯಾಗದೆ ವಿವೇಚನೆಯಿಂದ ಮತದಾನದ ಹಕ್ಕು ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

‘ದೇಶದ ಸಂವಿಧಾನವು 18 ವರ್ಷ ತುಂಬಿದ ಪ್ರತಿ ಪ್ರಜೆಗೂ ಮತದಾನದ ಹಕ್ಕು ನೀಡಿದೆ. ಸಾಮಾಜಿಕ. ರಾಜಕೀಯ ಬದಲಾವಣೆಗೆ ಚುನಾವಣೆ ಬುನಾದಿ. ಈ ಸಂಗತಿ ಅರಿತು ಚುನಾವಣೆಯಲ್ಲಿ ಅರ್ಹರನ್ನು ಆಯ್ಕೆ ಮಾಡಿ’ ಎಂದು ಕಿವಿಮಾತು ಹೇಳಿದರು.

ಎಸ್‌ಡಿಸಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಉಷಾ ಗಂಗಾಧರ್, ಅಕಾಡೆಮಿಕ್‌ ರೀಸರ್ಚ್‌ ಗ್ರೋಪ್‌ ಪ್ರತಿನಿಧಿ ಮುರಳಿಧರ್, ಎಸ್‌ಡಿಸಿ ಪದವಿ ಕಾಲೇಜಿನ ಪ್ರಾಂಶುಪಾಲೆ ಕೆ.ಪುಷ್ಪಲತಾ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಛಾಯಾದೇವಿ, ಸಂಪನ್ಮೂಲ ವ್ಯಕ್ತಿಗಳಾದ ಎನ್.ಎಲ್.ವಿಜಯಾ, ಆರ್.ಎಸ್.ನರೇಂದ್ರ, ಜೆ.ಬಿ.ಭಾಗ್ಯ, ಎನ್.ಮಂಜುನಾಥ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !