ಕಾರ್ಮಿಕರ ಶ್ರಮದಿಂದ ದೇಶದ ಅಭಿವೃದ್ಧಿ

ಶುಕ್ರವಾರ, ಮೇ 24, 2019
29 °C

ಕಾರ್ಮಿಕರ ಶ್ರಮದಿಂದ ದೇಶದ ಅಭಿವೃದ್ಧಿ

Published:
Updated:

ಕೋಲಾರ: ‘ಸಮಾಜದಲ್ಲಿ ಸಾಮಾಜಿಕ ಅರಿವು ಮೂಡಿಸಲು ಮತ್ತು ಅನ್ಯಾಯದ ವಿರುದ್ಧ ಹೋರಾಟ ರೂಪಿಸುವಲ್ಲಿ ಸಂಘಟನೆಗಳ ಪಾತ್ರ ಬಹು ಮುಖ್ಯ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಜ್ಯ ಅಸಂಘಟಿತ ಹಾಗೂ ಕಟ್ಟಡ ಕಾರ್ಮಿಕರ ರಕ್ಷಣಾ ಸಮಿತಿಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರಿಗೆ ಸನ್ಮಾನ ಮತ್ತು ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶದ ಆರ್ಥಿಕ ಅಭಿವೃದ್ಧಿಗೆ ಕಾರ್ಮಿಕರ ಶ್ರಮ ಮೂಲ ಕಾರಣ. ಕಾರ್ಮಿಕರೆಂದರೆ ತಮ್ಮ ತೋಳ್ಬಲ ಮತ್ತು ಬುದ್ಧಿ ಶಕ್ತಿಯಿಂದ ಕೂಡಿರುವುದು. ಸಂಘಟನೆಗಳು ಸ್ವಾರ್ಥ ಮನೋಭಾವ ಬಿಟ್ಟು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಕಾರ್ಮಿಕ ಕುಲಂ ತಾನೊಂದೆ ವಲಂ ಎಂಬ ಧ್ಯೇಯ ವಾಕ್ಯದೊಂದಿಗೆ ನಾವು 10 ವರ್ಷಗಳಿಂದ ಕಾರ್ಮಿಕರನ್ನು ಸಂಘಟಿಸುತ್ತಿದ್ದೇವೆ. ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿದ್ದೇವೆ, ಕಾನೂನು ಮತ್ತು ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದ್ದೇವೆ’ ಎಂದು ಸಮಿತಿ ಅಧ್ಯಕ್ಷ ಚೇತನ್ ಬಾಬು ಹೇಳಿದರು.

‘ಅಂಬೇಡ್ಕರ್ ಅವರು ದೇಶದಲ್ಲಿ ಮೊದಲ ಕಾರ್ಮಿಕ ಸಚಿವರಾಗಿ ಆಯ್ಕೆಯಾದಾಗ ಮಹಿಳಾ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದನ್ನು ಮರೆಯಬಾರದು. ಅಲ್ಲದೇ, ಮಹಿಳಾ ಕಾರ್ಮಿಕರು ಗರ್ಭಿಣಿಯರಾದ ಸಂದರ್ಭದಲ್ಲಿ ಅವರಿಗೆ ರಜೆ ಮತ್ತು ಸೇವಾ ಭತ್ಯೆ ನೀಡುವ ಕಾನೂನು ರೂಪಿಸಿದರು. ಕಾರ್ಮಿಕರಿಗೆ 8 ತಾಸಿನ ಕೆಲಸದ ಅವಧಿ ನಿಗದಿಪಡಿಸಿದ ಮಹಾತ್ಮ’ ಎಂದು ಜಿಲ್ಲಾ ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷೆ ವಿಜಯಮ್ಮ ಸ್ಮರಿಸಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಿರುದ್ಯೋಗಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು’ ಎಂದು ಕದಂಬ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸೋಮಶೇಖರ್ ಮನವಿ ಮಾಡಿದರು.

ಕಾರ್ಮಿಕರಾದ ಗೋವಿಂದ್, ಲಕ್ಮಮ್ಮ, ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ಶಂಕರ್‌ಕುಮಾರ್, ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಸೂಲ್, ಕವಿ ಶರಣಪ್ಪ ಗಬ್ಬೂರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !