ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸಬಲೀಕರಣದಿಂದ ದೇಶದ ಅಭಿವೃದ್ಧಿ

ಜಿಲ್ಲಾ ಪಂಚಾಯಿತಿ ಸಂಯೋಜಕ ಸುಂದರೇಶ್ ಅಭಿಪ್ರಾಯ
Last Updated 18 ಫೆಬ್ರುವರಿ 2020, 14:16 IST
ಅಕ್ಷರ ಗಾತ್ರ

ಕೋಲಾರ: ‘ಪ್ರತಿ ಗ್ರಾಮ ಪಂಚಾಯಿತಿಗೊಂದು ಮಹಿಳಾ ಒಕ್ಕೂಟ ರಚಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಸೌಲಭ್ಯ ಒದಗಿಸುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಂಯೋಜಕ ಎಸ್.ಸುಂದರೇಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ ರಚನೆಯಡಿ ತಾಲ್ಲೂಕಿನ ಕುರಗಲ್ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಒಕ್ಕೂಟದ ರಚನೆ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮಹಿಳೆಯರ ಸಬಲೀಕರಣವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರಗಳು ಈ ಸತ್ಯ ಅರಿತು ಸ್ತ್ರೀಯರ ಆರ್ಥಿಕ ಬಲವರ್ಧನೆಗೆ ಒತ್ತು ನೀಡುತ್ತಿವೆ’ ಎಂದರು.

‘ಹಳ್ಳಿಯ ಪ್ರತಿ ಮನೆಯ ಮಹಿಳೆಯೂ ಸಂಘದ ಸದಸ್ಯತ್ವ ಹೊಂದುವಂತೆ ಮಾಡಲಾಗುತ್ತಿದೆ. ಗ್ರಾ.ಪಂ ವ್ಯಾಪ್ತಿಯ 35ರಿಂದ 50 ಮಹಿಳಾ ಸ್ವಸಹಾಯ ಸಂಘಗಳನ್ನು ಒಗ್ಗೂಡಿಸಿ ಒಕ್ಕೂಟ ರಚಿಸುವ ಮೂಲಕ ಅವರಿಗೆ ಕನಿಷ್ಠ ₹ 20 ಲಕ್ಷದವರೆಗೆ ಬಂಡವಾಳವನ್ನು ಸರ್ಕಾರವೇ ನೀಡಲಿದೆ. ಇದಕ್ಕೆ ವಾರ್ಷಿಕ ಶೇ 12 ಬಡ್ಡಿ ವಿಧಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಮಹಿಳೆಯರ ಚಟುವಟಿಕೆಯಾಧಾರಿತ ಕಾರ್ಯಗಳಿಗೆ ಸಾಲ ನೀಡುತ್ತಿದ್ದು, 5 ವರ್ಷಗಳ ಹಿಂದೆ ಗದಗದಲ್ಲಿ ಮಹಿಳಾ ಒಕ್ಕೂಟ ರಚಿಸಿ ₹ 20 ಲಕ್ಷ ನೆರವು ಪಡೆದ ಒಕ್ಕೂಟಗಳು ಇಂದು ₹ 5 ಕೋಟಿ ವಹಿವಾಟು ನಡೆಸುತ್ತಿವೆ. ಗದಗ ಜಿಲ್ಲೆ ಮಾದರಿಯಾಗಿದೆ. ಪ್ರತಿ ತಿಂಗಳ ವಸೂಲಿಯನ್ನು ಮತ್ತೆ ಸಾಲವಾಗಿ ನೀಡಬಹುದು. ಹೊಸದಾಗಿ ರಚನೆಯಾಗುವ ಪ್ರತಿ ಸಂಘಕ್ಕೆ ಒಂದು ಬಾರಿಗೆ ₹ 15 ಸಾವಿರ ಸುತ್ತುನಿಧಿಯನ್ನು ಸರ್ಕಾರವೇ ನೀಡುತ್ತದೆ’ ಎಂದು ವಿವರಿಸಿದರು.

‘ಮಹಿಳಾ ಸಂಘಗಳ ಸದಸ್ಯರು ಸಾಲಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಈ ಯೋಜನೆ ರೂಪಿಸಿದ್ದು, ಮಹಿಳೆ ಸಬಲವಾದರೆ ಮಾತ್ರ ಇಡೀ ಕುಟುಂಬ ಆರ್ಥಿಕವಾಗಿ ಬಲಗೊಳ್ಳುತ್ತದೆ. ಈ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

ಸಾಲದ ಸದ್ಬಳಕೆ: ‘ಸರ್ಕಾರದ ಜತೆಗೆ ಸಹಕಾರ ಸಂಘಗಳು ಸಹ ಮಹಿಳೆಯರಿಗೆ ಧೈರ್ಯದಿಂದ ಸಾಲ ನೀಡುತ್ತಿವೆ. ಮಹಿಳೆಯರು ಸಾಲ ಮರುಪಾವತಿ ಮತ್ತು ಪಡೆದ ಸಾಲದ ಹಣದ ಸದ್ಬಳಕೆ ಮೂಲಕ ಬದುಕು ರೂಪಿಸಿಕೊಳ್ಳಬೇಕು’ ಎಂದು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ಕಿವಿಮಾತು ಹೇಳಿದರು.

‘ಮಹಿಳಾ ಸಂಘಗಳು ಒಕ್ಕೂಟವಾಗಿ ಬಲಗೊಂಡು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆರ್ಥಿಕವಾಗಿ ಬಲಗೊಳ್ಳಲು ಉದ್ಯೋಗ ಆಧಾರಿತ ಚಟುವಟಿಕೆ ಆರಂಭಿಸಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮುನಿರಾಜು ಸಲಹೆ ನೀಡಿದರು.

ಗ್ರಾ.ಪಂ ಸದಸ್ಯರಾದ ಮುರಳಿ ಮೋಹನ್, ರತ್ನಮ್ಮ, ರಮೇಶ್, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT