ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿ ಮಾರಾಟಗಾರರಿಂದ ಧರಣಿ, ಸಾರ್ವಜನಿಕರು ಸಹಕರಿಸಲು ಮನವಿ

Last Updated 2 ಜನವರಿ 2020, 12:39 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರಿ ಔಷಧಿ ಮಾರಾಟಗಾರರ ವಿವಿಧ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರದ ಕ್ರಮವನ್ನು ಖಂಡಿಸಿ ಜನವರಿ 12ರವರೆಗೆ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಸರ್ಕಾರಿ ಫಾರ್ಮಸಿಸ್ಟರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮ್ ಕೋರಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಔಷದಿ ಮಾರಾಟಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನೇಕ ಹೋರಾಟಗಳನ್ನು ನಡೆಸಿ ಸರ್ಕಾರದ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.

‘ಔಷಧಿ ಮಾರಾಟಗಾರರ ಹುದ್ದೆಯನ್ನು ಫಾರ್ಮಸಿ ಅಧಿಕಾರಿ ಎಂದು ಪದನಾಮ ಮಾಡಬೇಕು. ಜತೆಗೆ ನಿಗದಿತ ವೇತನ ಪಾವತಿ ಮಾಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದ್ದರೂ ಸೌಜನ್ಯಕ್ಕೂ ಸ್ಪಂದಿಸಿಲ್ಲ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 3,500 ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದು. ಜಿಲ್ಲೆಯಲ್ಲಿ 84 ಮಂದಿ ಇದ್ದಾರೆ. 15 ದಿನಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದಾಗ ಆರೋಗ್ಯ ಇಲಾಖೆ ಆಯುಕ್ತರಿಗೆ ರವಾನಿಸಿ ಶೀಘ್ರ ಕ್ರಮಕ್ಕೆ ನಿರ್ದೇಶನ ನೀಡಿದ್ದರೂ ಇದುವರೆಗೂ ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ’ ಎಂದರು.

‘ಸರ್ಕಾರದ ನಿರ್ಲಕ್ಷ ಧೋರಣೆ ಖಂಡಿಸಿ ಸರ್ಕಾರದ ಗಮನ ಸೆಳೆಯಲು ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುರುವಾರದಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತೇವೆ. ಮುಂದೆ ಜನವರಿ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ರ್ಯಾಲಿಮೂಲಕ ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಫೆಬ್ರುವರಿ 10 ರಿಂದ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹೆಚ್ಚುವರಿ ಕಾರ್ಯ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವುದು’ ಎಂದು ಹೇಳಿದರು.

‘ಬೇಡಿಕೆಗಳನ್ನು ಈಡೇರಿಸಲು ಸಾಕಷ್ಟು ಸಮಯವಿದೆ. ಸರ್ಕಾರ ಸ್ಪಂದಿಸದಿದ್ದರೆ ಮಾರ್ಚ್ 10 ರಂದು ಸರ್ಕಾರಿ ಆಸ್ಪತ್ರೆಗಳ ಹೊರರೋಗಿಗಳ ಸೇವಾ ವಿಭಾಗದಲ್ಲಿ ಸೇವೆ ಸ್ಥಗಿತಗೊಳಿಸುವುದು. ಕಡೇ ಹಂತವಾಗಿ ಏಪ್ರಿಲ್ 10ರಿಂದ ಬೇಡಿಕೆ ಈಡೇರುವವರೆಗೆ ಇಲಾಖೆಯ ಇನ್ನಿತರೆ ಸಂಘಗಳ ಸಹಕಾರದಿಂದಿಗೆ ಕರ್ತವ್ಯಕ್ಕೆ ಪಾಲ್ಗೊಳ್ಳದೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯ ಎಸ್.ನಂದೀಶ್ ಕುಮಾರ್ ಮಾತನಾಡಿ, ‘ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಂಖ್ಯೆಗೆ ಅನುಗುಣವಾಗಿ ಔಷಧಿ ಮಾರಾಟಗಾರರನ್ನು ನೇಮಕ ಮಾಡಬೇಕು. ಔಷಧ ಉಗ್ರಾಣಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಪ್ರಭಾರಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸಮಸ್ಯೆಗಳಾಗುತ್ತಿದೆ’ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ತಿಮ್ಮರಾಜು ಮಾತನಾಡಿ, ‘ಭಾರತೀಯ ತಾಂತ್ರಿಕ ಮಹಾ ಪರಿಷತ್ತು ಫಾರ್ಮಸಿಯನ್ನು ಡಿಪ್ಲೊಮಾ ಎಂದು ಪರಿಗಣಿಸಿದ್ದರೂ ಇಲಾಖೆಯಲ್ಲಿ ಅದಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ. ರಾಜ್ಯದಲ್ಲಿ ಸೃಷ್ಟಿಸಿರುವ 150 ಆರೋಗ್ಯ ವಿಸ್ತೀರ್ಣ ಕೇಂದ್ರದಲ್ಲಿ ಫಾರ್ಮಸಿ ಕಾಯ್ದೆ ಅನುಗುಣವಾಗಿ ಫಾರ್ಮ್ಸಿಸ್ಟರನ್ನು ನೇಮಕ ಮಾಡಬೇಕು, ಈ ಹೋರಾಟಕ್ಕೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಫಾರ್ಮಸಿಸ್ಟ್ ಸಂಘದ ಪದಾಧಿಕಾರಿಗಳಾದ ಡಿ.ಕೃಷ್ಣಮೂರ್ತಿ, ಸತ್ಯವಾಣಿ, ಸರ್ಕಾರಿ ನೌಕರರ ಸಂಘದ ಸದಸ್ಯ ಎನ್.ಶಿವಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT