ಕೋಲಾರ: 'ರಾಜ್ಯದಲ್ಲಿ ಸರ್ಕಾರ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯಪಾಲರ ಜವಾಬ್ದಾರಿ. ಆದರೆ, ಸಂವಿಧಾನ ಪಾಲಕರೇ ಷಡ್ಯಂತ್ರದಲ್ಲಿ ಶಾಮೀಲಾದರೆ, ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಕೈಹಾಕಿದರೆ ನಾವು ಸುಮ್ಮನಿರಬೇಕೇ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಅವರು ಪ್ರಯತ್ನ ನಡೆಸಿದ್ದಾರೆ. ಚುನಾಯಿತ ಸರ್ಕಾರದ ಮೇಲೆ ಹಾಗೂ ಕರ್ನಾಟಕದ ಜನತೆ ಮೇಲೆ ನಡೆಸಿರುವ ದಾಳಿ ಇದು. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ' ಎಂದರು.
'ರಾಜ್ಯದ ಆಡಳಿತ ವ್ಯವಸ್ಥೆಯನ್ನು ಹಾಳುಗೆಡವಲು ಸಂಚು ನಡೆಯುತ್ತಿದೆ. ರಾಜ್ಯಪಾಲರ ನಡೆ ಅಭಿವೃದ್ಧಿ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.