ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ ಕಿವಿಮಾತು
Last Updated 19 ನವೆಂಬರ್ 2019, 15:08 IST
ಅಕ್ಷರ ಗಾತ್ರ

ಕೋಲಾರ: ‘ಅಂಗವೈಕಲ್ಯ ಶಾಪವಲ್ಲ. ಮಗು ಅಂಗವಿಕಲವಾಗಿ ಹುಟ್ಟುವುದರಲ್ಲಿ ಪೋಷಕರ ಪಾತ್ರ ಇರುವುದಿಲ್ಲ. ಕಾರಣಾಂತರದಿಂದ ಅಂಗವಿಕಲರಾಗಿ ಹುಟ್ಟುವವರಿಗೆ ಮೋಸ ಮಾಡಬಾರದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ ಕಿವಿಮಾತು ಹೇಳಿದರು.

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಅಂಗವಿಕಲರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಅಂಗವಿಕಲರ ಹಕ್ಕು, ಸಮಾನತೆ, ಮುಖ್ಯವಾಹಿನಿಯಲ್ಲಿ ಕೆಲಸ ಮಾಡಲು ಸೌಲಭ್ಯ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ವಿಶ್ವ ಅಂಗವಿಕಲರ ದಿನ ಆಚರಿಸುತ್ತಿದೆ. ಅಂಗವಿಕಲರು ಸೃಷ್ಟಿಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸ್ವಾವಲಂಬಿ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅಂಗವಿಕಲರಿಗೆ ಸಮಾಜದ ಅನುಕಂಪ ಬೇಕಿಲ್ಲ. ಅವರ ಕೌಶಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸುತ್ತಿದೆ. ಅಂಗವೈಕಲ್ಯವು ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ. ಅಂಗವಿಕಲರು ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಿ’ ಎಂದು ಹೇಳಿದರು.

ಮೇಧಾವಿಗಳು: ‘ಅಂಗವಿಕಲರಿಗೆ ಅವಕಾಶ ನೀಡಿದರೆ ಎಲ್ಲಾ ಸ್ಪರ್ಧೆಗಳಲ್ಲೂ ಸ್ಪರ್ಧಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬಲ್ಲರು. ಅಂಗವಿಕಲರು ಅಂಗವೈಕಲ್ಯ ಹೊಂದಿದ್ದರೂ ಬುದ್ಧಿಶಕ್ತಿಯಲ್ಲಿ ಮೇಧಾವಿಗಳಾಗಿರುತ್ತಾರೆ’ ಎಂದು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ವೆಂಕಟರಮಣಪ್ಪ ಅಭಿಪ್ರಾಯಪಟ್ಟರು.

‘ಅಂಗವಿಕಲರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಸಭೆಯಲ್ಲಿ ಒತ್ತಾಯಿಸುತ್ತೇನೆ. ಕೋಲಾರ ಜಿಲ್ಲೆಗೆ ಇನ್ನು ಹೆಚ್ಚಿನ ಸವಲತ್ತು ದೊರಕಿಸಲು ಹೋರಾಟ ಮಾಡುತ್ತೇನೆ. ಅಂಗವಿಕಲರ ಹಿತರಕ್ಷಣೆಗಾಗಿ ಉತ್ತಮ ಸೇವೆ ಸಲ್ಲಿಸುತ್ತೇನೆ’ ಎಂದು ಅಂಗವಿಕಲರ ಅಭಿವೃದ್ಧಿ ಸಲಹಾ ಕೇಂದ್ರ ಮಂಡಳಿ ಸದಸ್ಯ ಚಂದ್ರಪ್ಪ ಭರವಸೆ ನೀಡಿದರು.

ಪ್ರತಿಭಾವಂತರು: ‘ಅಂಗವಿಕಲರು ಸಾಮಾನ್ಯ ವ್ಯಕ್ತಿಗಿಂತ ಪ್ರತಿಭಾವಂತರಾಗಿರುತ್ತಾರೆ. ಅನೇಕರು ತಮ್ಮ ಪ್ರತಿಭೆ ಪ್ರದರ್ಶಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಹಾಸನದ ಗಿರೀಶ್ ಅಂಗವಿಕಲ ಕ್ರೀಡಾಪಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯದ ಕೀರ್ತಿ ಹೆಚ್ಚಿದ್ದಾರೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ಅಧಿಕಾರಿ ರಮೇಶ್ ಸ್ಮರಿಸಿದರು.

ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಶಂಕರ್, ಅಂತರಗಂಗೆ ಅಂಗವಿಕಲರ ಸಂಸ್ಥೆ ಕಾರ್ಯದರ್ಶಿ ಶಂಕರ್, ನಂದ ದೀಪಾಸಂಸ್ಥೆ ಸದಸ್ಯ ರಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT