ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನಪೂರಕ ಅಧ್ಯಾತ್ಮ ಒಲವು

ಲೇಖಕ ಪ್ರಭುಶಂಕರ್ ಕಣ್ಮರೆ; ಇಂದು ಅಂತ್ಯಸಂಸ್ಕಾರ
Last Updated 9 ಏಪ್ರಿಲ್ 2018, 11:18 IST
ಅಕ್ಷರ ಗಾತ್ರ

ಮೈಸೂರು: ಪ್ರಭುಶಂಕರ್‌ ಅವರಿಗೆ ಅಧ್ಯಾತ್ಮದ ಒಲವಿತ್ತು. ಆದರೆ, ಅಧ್ಯಯನಪೂರಕವಾದ ಒಲವು. ಅದು ಕರ್ಮಠ ನಿಷ್ಠೆಯದಲ್ಲ. ನಿತ್ಯ ಅವರು ಕುವೆಂಪು ಜೊತೆಗೆ ಮೈಸೂರಿನಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದರು. ಹೀಗೆ ಒಮ್ಮೆ ಹೋಗುವಾಗ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಜಾತ್ರೆಗೆ ಹೋಗುವುದನ್ನು ಕಂಡ ಕುವೆಂಪು, ಎಂಥಾ ಮೌಢ್ಯ ನೋಡಿ ಎಂದರಂತೆ. ಆಗ ಪ್ರಭುಶಂಕರ್‌ ಹೇಳಿದರು– ನಾನು, ನೀವು ರಾಮಕೃಷ್ಣ ಆಶ್ರಮಕ್ಕೆ ಹೋಗುತ್ತೇವಲ್ಲ. ಅದು ಮೌಢ್ಯವಲ್ಲವೆ? ನಮ್ಮದು ಅಕ್ಷರಸ್ಥರ ಮೌಢ್ಯ. ಅವರದು ಅನಕ್ಷರಸ್ಥರ ಮೌಢ್ಯ. ಇಬ್ಬರದೂ ಒಂದೇ ಅಲ್ವಾ ಎಂದರು. ಆಗ ಕುವೆಂಪು ಒಂದು ನಿಮಿಷ ಮೌನವಾಗಿ ಹೌದು, ನೀವು ಹೇಳುವುದು ಸರಿ ಎಂದರು. ಹೀಗೆ ತಮ್ಮ ಗುರುಗಳ ಕುರಿತು ಸ್ಮರಿಸಿಕೊಂಡರು ಪ್ರೊ.ಪಂಡಿತಾರಾಧ್ಯ.

‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಓದುವಾಗ ಅವರ ಶಿಷ್ಯನಾಗಿದ್ದೆ. ಅವರು ಮಹಾಕಾವ್ಯಗಳನ್ನು ಬೋಧಿಸುತ್ತಿದ್ದರು. ಬದುಕು ಗಂಭೀರವೆಂದು ತಿಳಿದುಕೊಂಡಾಗ, ಹಾಸ್ಯದ ನೆಲೆಯಲ್ಲಿ ನೋಡಬೇಕು ಎಂದು ಕಲಿಸಿದ್ದರು. ಇದರಿಂದ ಬದುಕನ್ನು ಸಮತೂಕದಲ್ಲಿ ನೋಡಲು ಸಾಧ್ಯವಾಯಿತು. ಯಾವ ಕಾರಣಕ್ಕೂ ಅವರು ಬೇಸರ ಹಾಗೂ ದುಃಖಪಟ್ಟವರಲ್ಲ. ಇದನ್ನು ನಮಗೂ ಕಲಿಸಿದರು’ ಎಂದು ‘ಪ್ರಜಾವಾಣಿ’ಗೆ ಪ್ರೊ.ಪಂಡಿತಾರಾಧ್ಯ ತಿಳಿಸಿದರು.

ಕುವೆಂಪು ಅವರ ಪ್ರೀತಿಯ ಶಿಷ್ಯ ಅವರು. ಅವರ ಸೇವೆಯನ್ನು ಕೊನೆಯವರೆಗೂ ಮಾಡಿದರು. ರಾಮಕೃಷ್ಣ ಆಶ್ರಮದಲ್ಲೇ ಬೆಳೆದರು. ರಾಮಕೃಷ್ಣ ಪರಮಹಂಸ, ವಿವೇಕಾನಂದ ಹಾಗೂ ಕುವೆಂಪು ಅವರ ಪ್ರಭಾವಕ್ಕೆ ಒಳಗಾದವರು. ಒಳ್ಳೆಯ ಅನುವಾದಕರಾಗಿದ್ದ ಅವರು, ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಎರಡು ದಶಕಗಳವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದ ಅವರು, ಅನೇಕ ಶ್ರೇಷ್ಠ ಗ್ರಂಥಗಳನ್ನು ಪ್ರಕಟಿಸಿದರು ಎಂದು ಅವರ ಶಿಷ್ಯ, ಸಾಹಿತಿ ಕಾಳೇಗೌಡ ನಾಗವಾರ ಮೆಲುಕು ಹಾಕಿದರು.

ಉನ್ನತ ವ್ಯಕ್ತಿತ್ವದ ಗುರು ಪ್ರಭುಶಂಕರ್‌. ಅವರಂಥ ಮತ್ತೊಬ್ಬ ಗುರುವನ್ನು ನಾನು ಕಂಡಿಲ್ಲ. ಪರೋಪಕಾರಿ ಗುಣ ಹೊಂದಿದ್ದ ಅವರು, ಹಲವು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಪ್ರಭಾವಶಾಲಿ ಅನುವಾದಕ ಕೂಡ. ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ಅದ್ಭುತ ಹಿಡಿತ ಹೊಂದಿದ್ದ ಅವರು ಅಷ್ಟೇ ಪರಿಣಾಮಕಾರಿಯಾಗಿ ಬೋಧನೆ ಮಾಡುತ್ತಿದ್ದರು. ಮೈಸೂರು ವಿ.ವಿ ಅಧ್ಯಾಪಕರ ಕ್ವಾರ್ಟ್ರಸ್‌ನಲ್ಲಿ ಇದ್ದಾಗ ಪ್ರಭುಶಂಕರ್‌ ಅವರು ಸಹಾಯ ಮಾಡುತ್ತಿದ್ದ ರೀತಿ ಅದ್ಭುತ. ಅದಕ್ಕೆ ಅವರ ಪತ್ನಿ ಕೂಡ ಕೈಜೋಡಿಸುತ್ತಿದ್ದರು ಎಂದು ವಿಮರ್ಶಕ ಜಿ.ಎಚ್‌.ನಾಯಕ ಶ್ಲಾಘಿಸಿದರು.

ಮಾನವತಾವಾದಿ, ಅದ್ಭುತ ವಾಗ್ಮಿ: ಪ್ರಭುಶಂಕರ್‌ ಒಬ್ಬ ಮಾನವತಾವಾದಿ. ಅದ್ಭುತ ವಾಗ್ಮಿ. ಯಾವುದೇ ಕಾರಣಕ್ಕೂ ತಮ್ಮ ಅನಿಸಿಕೆಗಳನ್ನು ಬೇರೊಬ್ಬರ ಮೇಲೆ ಹೇರುತ್ತಿರಲಿಲ್ಲ. ಉತ್ತಮ ಸ್ನೇಹಜೀವಿ. ಮೈಸೂರು ವಿ.ವಿ ಇಂಗ್ಲಿಷ್‌–ಕನ್ನಡ ನಿಘಂಟು ರಚಿಸಲು ಕಾರಣರಾದವರು. ರಾಮಕೃಷ್ಣ ಪರಮಹಂಸ, ವಿವೇಕಾನಂದರ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂದು ಕವಿ ಕೆ.ಸಿ.ಶಿವಪ್ಪ ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT