ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೂದೆಯಲ್ಲಿ ತಾರತಮ್ಯ: ಹೋರಾಟದ ಎಚ್ಚರಿಕೆ

ಲಿಂಗ ಪರಿವರ್ತಿತ ವ್ಯಕ್ತಿಗಳ ಹಕ್ಕು ರಕ್ಷಣೆ ಮಸೂದೆಗೆ ಸಂಗಮ ಸಂಸ್ಥೆ ವಿರೋಧ
Last Updated 22 ನವೆಂಬರ್ 2019, 13:29 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರವು ಲಿಂಗ ಪರಿವರ್ತಿತ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ಹಾಗೂ ಕಲ್ಯಾಣ ಮಸೂದೆ–2019 ಅಂಗೀಕರಿಸಿದರೆ ದೇಶದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಸಂಗಮ ಹಾಗೂ ಸಮ್ಮಿಲನ ಸಂಸ್ಥೆ ಜಿಲ್ಲಾ ಸಂಚಾಲಕಿ ಅಶ್ವಿನಿ ರಾಜನ್ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಸೂದೆಯಲ್ಲಿ ತಾರತಮ್ಯವಾಗಿದೆ. ಮಸೂದೆ ವಿರುದ್ಧ ಹಿಂದಿನ ವರ್ಷ ಡಿಸೆಂಬರ್‌ನಲ್ಲಿ ದೇಶದೆಲ್ಲೆಡೆ ಪ್ರತಿಭಟನೆ ನಡೆಸಲಾಗಿತ್ತು. ಹೀಗಾಗಿ ಕೇಂದ್ರವು ಮಸೂದೆ ಕೈಬಿಟ್ಟಿತ್ತು’ ಎಂದು ತಿಳಿಸಿದರು.

‘ನರೇಂದ್ರ ಮೋದಿಯವರು 2ನೇ ಅವಧಿಗೆ ಪ್ರಧಾನಿಯಾದ ನಂತರ ತಿದ್ದುಪಡಿ ಇಲ್ಲದೆ ಮತ್ತು ಸ್ಥಾಯಿ ಸಮಿತಿ ಮುಂದೆ ತಾರದೆ ಮಸೂದೆ ಅಂಗೀಕರಿಸಲು ಮುಂದಾಗಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ ಹಾಗೂ ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ’ ಎಂದು ದೂರಿದರು.

‘ಭಿಕ್ಷಾಟನೆಯು ಲಿಂಗ ಪರಿವರ್ತಿತ ಸಮುದಾಯದ ಸಂಸ್ಕೃತಿ. ಹಿರಿಯರ ಕಾಲದಿಂದಲೂ ಜೀವನೊೀಪಾಯಕ್ಕೆ ಕಂಡುಕೊಂಡ ವೃತ್ತಿಯಾಗಿದೆ. ದೇವಾಲಯಗಳಲ್ಲಿ ಪೂಜಾರಿಗೆ ಹಾಕುವ ಹಣ ದಕ್ಷಿಣೆ. ಆದರೆ, ಲೈಂಗಿಕ ಅಲ್ಪಸಂಖ್ಯಾತರು ಪೂಜೆ ಮಾಡಿ ಪಡೆಯುವ ಹಣ ಭಿಕ್ಷೆ ಎನ್ನುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

‘ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ಹೆತ್ತವರ ಮನೆಯಲ್ಲಿ ಇರಬೇಕೆಂದು ನೂತನ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಹೆತ್ತವರು ನಮ್ಮನ್ನು ಒಪ್ಪಿಕೊಂಡಿದ್ದರೆ ಯಾಕೆ ಮನೆಯಿಂದ ಹೊರಗೆ ಬರುತ್ತಿದ್ದೆವು? ಹಲವು ದಶಕಗಳ ಕಾಲ ಹೆತ್ತವರಿಂದ ದೂರವಿರುವ ನಮ್ಮನ್ನು ಈಗ ಪೋಷಕರು ಮನೆಗೆ ಸೇರಿಸಿಕೊಳ್ಳುತ್ತಾರೆಯೇ’ ಎಂದು ಕೇಳಿದರು.

ಹಕ್ಕು ಉಲ್ಲಂಘನೆ: ‘ಲಿಂಗ ಪರಿವರ್ತಿತರೆಂದು ಸ್ವಯಂ ಘೋಷಣೆ ಮಾಡಿಕೊಂಡರೆ ಅಂತಹವರನ್ನು ಲೈಂಗಿಕ ಅಲ್ಪಸಂಖ್ಯಾತರೆಂದು ಪರಿಗಣಿಸುವಂತೆ ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಆದರೆ, ನೂತನ ಮಸೂದೆ ಪ್ರಕಾರ ಪರಿಶೀಲನಾ ಸಮಿತಿ ಮುಂದೆ ಹಾಜರಾಗಿ ಬಟ್ಟೆ ಕಳಚಿ ತಾನು ಲಿಂಗ ಪರಿವರ್ತಿತನೆಂದು ರುಜುವಾತುಪಡಿಸಬೇಕಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಕಿಡಿಕಾರಿದರು.

‘ಮಾನವ ಹಕ್ಕುಗಳ ವಿರೋಧಿ ಆಗಿರುವ ಹೊಸ ಮಸೂದೆ ಈಗಾಗಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದು, ರಾಜ್ಯಸಭೆಯಲ್ಲಿ ಚರ್ಚೆ ಹಂತದಲ್ಲಿದೆ. ಮಸೂದೆಯು ನ.25ರಂದು ಅಂಗೀಕಾರಗೊಳ್ಳುವ ಸಾಧ್ಯತೆಯಿದೆ. ಸಮುದಾಯದ ಅಭಿಪ್ರಾಯ ಒಳಗೊಳ್ಳದೆ ಮಸೂದೆ ಅಂಗೀಕರಿಸಿದರೆ ಹೋರಾಟ ನಡೆಸುತ್ತೇವೆ. ಈ ಸಂಬಂಧ ದೆಹಲಿಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

ತಿಳಿವಳಿಕೆಯಿಲ್ಲ: ‘ಸಮುದಾಯಕ್ಕೆ ಸಾಮಾಜಿಕ ಸೌಲಭ್ಯ ನೀಡಿದ್ದರೂ ಅನುಷ್ಠಾನಕ್ಕೆ ಬರುತ್ತಿಲ್ಲ. ಸರ್ಕಾರದ ಯೋಜನೆ ಜಾರಿಗೊಳಿಸುವ ಅಧಿಕಾರಿಗಳಿಗೆ ಲೈಂಗಿಕ ಅಲ್ಪಸಂಖ್ಯಾತರು ಎಂದರೆ ಯಾರೆಂಬ ತಿಳಿವಳಿಕೆಯಿಲ್ಲ. ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲ’ ಎಂದು ಸಮ್ಮಿಲನ ಸಂಸ್ಥೆ ವ್ಯವಸ್ಥಾಪಕ ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಅಧಿಕಾರಿಗಳಿಗೆ ಸಂಸ್ಥೆಯಿಂದಲೇ ಕಾರ್ಯಾಗಾರ ನಡೆಸಲು ಸಿದ್ಧರಿದ್ದೇವೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯು ಅವಕಾಶ ಕಲ್ಪಿಸಬೇಕು. ಸಮುದಾಯದವರಲ್ಲಿ ಅನೇಕರು ಲೈಂಗಿಕ ಕಾರ್ಯಕರ್ತೆಯರು ಆಗಿರುವುದರಿಂದ ಎಚ್‍ಐವಿ ಸೋಂಕು ಬಾರದಂತೆ ತಡೆಯಲು ಔಷಧ, ಮಾತ್ರೆ ಒದಗಿಸಬೇಕು’ ಎಂದು ಮನವಿ ಮಾಡಿದರು.

ಸಾಲ ಸಿಗುತ್ತಿಲ್ಲ: ‘ಲೈಂಗಿಕ ಅಲ್ಪಸಂಖ್ಯಾತರಲ್ಲಿ ಅನೇಕರು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಅರ್ಧಕ್ಕೆ ನಿಲ್ಲಿಸಿದವರಿದ್ದಾರೆ. ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಿಲ್ಲ. ಅಧಿಕಾರಿಗಳು ಪರೀಕ್ಷಾ ಮಂಡಳಿಯ ನೆಪ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಸಾಲ ಸೌಲಭ್ಯವೂ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಜಿಲ್ಲೆಯಲ್ಲಿ ಸುಮಾರು 1,407 ಮಂದಿ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. 449 ಮಂದಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಸೀರೆ ಉಡುತ್ತಿದ್ದಾರೆ. ಅನೇಕರಲ್ಲಿ ಹೆಣ್ಣಿನ ಭಾವನೆ ಇದ್ದರೂ ಕುಟುಂಬ ಹಾಗೂ ಸಮಾಜಕ್ಕೆ ಹೆದರಿ ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಪ್ಯಾಂಟ್ ಶರ್ಟ್ ಧರಿಸುತ್ತಿದ್ದಾರೆ. ಆದರೆ, ಅವರು ಸಹ ಲಿಂಗ ಪರಿವರ್ತಿತರು’ ಎಂದು ಸ್ಪಷ್ಟಪಡಿಸಿದರು.

ಸಮ್ಮಿಲನ ಸಂಸ್ಥೆ ಸದಸ್ಯರಾದ ಚಾಂದಿನಿ, ಸಿಂಧ್ಯಾ ನಾಯಕ್, ಕಾಂತದೇವಿ, ಭವಾನಿ, ನಿತ್ಯಾ, ನಾಜೀದ್‌ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT