ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಝಳಕ್ಕೆ ವಿಜಯಪುರ ತತ್ತರ..!

43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲು; ಈ ಬೇಸಿಗೆಯ ಗರಿಷ್ಠ ದಾಖಲೆ
Last Updated 3 ಮೇ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಈ ಬೇಸಿಗೆಯ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ ಗುರುವಾರ ದಾಖಲಾಯಿತು. ಬಿಸಿಲ ಝಳ ಮತ್ತು ಬಿಸಿ ಗಾಳಿ ಜನಜೀವನವನ್ನು ಹೈರಾಣಾಗಿಸಿದೆ.

ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲ ಯದ ಹವಾಮಾನ ಮುನ್ಸೂಚನಾ ಕೇಂದ್ರದಲ್ಲಿ ಮೇ 1ರಂದು 42 ಡಿಗ್ರಿ, ಮೇ 2ರಂದು 41.2 ಡಿಗ್ರಿ ಹಾಗೂ ಗುರುವಾರ 42 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಮುಂಜಾನೆ 8ರಿಂದಲೇ ಬಿಸಿಲ ಪ್ರಖರತೆ ಹೆಚ್ಚಿದ್ದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5ರವರೆಗೂ ಹೊರಗೆ ಓಡಾಡುವುದು ದುಸ್ತರ ಎಂಬಂಥ ಸನ್ನಿವೇಶ ನಿರ್ಮಾಣಗೊಂಡಿದೆ.

‘ವಿಜಯಪುರ, ‘ಬಿಸಿಯ ದ್ವೀಪ’ದ ವ್ಯಾಪ್ತಿಯೊಳಗೆ ಬರುವುದರಿಂದ ಅಲ್ಲಿನ ತಾಪಮಾನ, ನಮ್ಮ ಹವಾಮಾನ ಕೇಂದ್ರದಲ್ಲಿ ದಾಖಲಾಗುವ ಗರಿಷ್ಠ ತಾಪಮಾನಕ್ಕಿಂತ ಕನಿಷ್ಠ 1ರಿಂದ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿರುತ್ತದೆ. ಅಂದರೆ, ನಗರದ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಈ ಸಾಲಿನಲ್ಲಿ ದಾಖಲಾದ ದಾಖಲೆ ಬಿಸಿಲು ಇದಾಗಿದೆ’ ಎಂದು ಕೇಂದ್ರದ ತಾಂತ್ರಿಕ ಅಧಿಕಾರಿ ಶಂಕರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿಗೆ ಪೂರಕ: ‘ವಾತಾವರಣದಲ್ಲಿ ತಾಪಮಾನ ಹೆಚ್ಚಿದಂತೆ ಕೃಷಿಕರಿಗೆ ಅನುಕೂಲವೂ ಹೆಚ್ಚಲಿದೆ. ಮೇ 15ರವರೆಗೂ ಇದೇ ವಾತಾವರಣ ಮುಂದು
ವರೆದರೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯಲಿದೆ. ಬಿಸಿಲ ತಾಪಮಾನ ಹೆಚ್ಚಿದಂತೆ ಹೊಲದಲ್ಲಿರುವ ಕಳೆ ಬೀಜ ನಾಶವಾಗುತ್ತವೆ. ಕ್ರಿಮಿ–ಕೀಟಗಳು ಬಿಸಿಲ ತಾಪ ತಾಳಲಾರದೆ ಸತ್ತು ಹೋಗುತ್ತವೆ. ಇದು ರೈತರಿಗೆ ಪ್ರಯೋಜನಕಾರಿಯಾಗಲಿದೆ’ ಎನ್ನುತ್ತಾರೆ ಕುಲಕರ್ಣಿ.

‘ಈ ಸಮಯದಲ್ಲಿ ಮಳೆ ಸುರಿದರೆ ಮುಂಗಾರು ಪೂರ್ವ, ಮುಂಗಾರು ಮಳೆ ಸಮರ್ಪಕವಾಗಿ ಸುರಿಯದು. ಮೇ 15ರ ಬಳಿಕವೇ ವರ್ಷಧಾರೆಯಾಗಬೇಕು. ಆ ವೇಳೆಗೆ ಮಾತ್ರ ಸದೃಢ ಮಳೆ ಮೋಡಗಳಿರುತ್ತವೆ. ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ ಮಳೆಯ ಸಾಧ್ಯತೆ ಕ್ಷೀಣಿಸಿದೆ’ ಎಂದು ಅವರು ವಿವರಿಸಿದರು.

ಸಿಗ್ನಲ್ ಬಂದ್‌: ‘ಸುಡುವ ಬಿಸಿಲಿನಿಂದ ಮಧ್ಯಾಹ್ನ ವೇಳೆ ಇಡೀ ನಗರವೇ ಸ್ತಬ್ಧಗೊಂಡಿರುತ್ತದೆ. ರಸ್ತೆಗಳು ಬಿಕೋ ಎನ್ನುತ್ತಿರುತ್ತವೆ. ಸಂಚಾರ ಪೊಲೀಸರು ಸಿಗ್ನಲ್‌ ಬಂದ್‌ ಮಾಡಿ, ದ್ವಿಚಕ್ರ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಮುಂಜಾನೆ– ಮುಸ್ಸಂಜೆಯಷ್ಟೇ ಚಟುವಟಿಕೆ ನಡೆಯುತ್ತಿವೆ’ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ಬಸವರಾಜ ಹಳಕಟ್ಟಿ.

‘ಪ್ರಮುಖ ಕೆಲಸಗಳಿದ್ದರಷ್ಟೇ ಮನೆಯಿಂದ ಹೊರಗೆ ಬರ್ತಿವಿ. ಇಲ್ಲದಿದ್ದರೇ ಮುಸ್ಸಂಜೆವರೆಗೂ ಹೊರಗೆ ಹೆಜ್ಜೆಯಿಡಲ್ಲ. ನಸುಕಿನಲ್ಲೇ ಲಘು ಕೆಲಸ ಮುಗಿಸಿಕೊಳ್ತೀವಿ. ಭೇಟಿಗಾಗಿ ಮನೆಗೆ ಬರುವವರಿಗೆ ಚಹಾ, ಬಾದಾಮಿ ಹಾಲಿನ ಬದಲು ಪಾನಕ, ತಂಪು ನೀರು ಕೊಟ್ಟು ಉಪಚರಿಸುತ್ತಿದ್ದೇವೆ’ ಎಂದು ನಗರ ನಿವಾಸಿ ವೆಂಕಟೇಶ ಕೋಲಕಾರ ಹೇಳಿದರು.

ಉತ್ತರ ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್‌ ದಾಟಿದ ತಾಪಮಾನ (ಡಿಗ್ರಿ ಸೆಲ್ಷಿಯನ್‌ನಲ್ಲಿ)

ಬಾಗಲಕೋಟೆ;41

ಬಳ್ಳಾರಿ;41

ಹಾವೇರಿ;41

ಗದಗ;40

ಧಾರವಾಡ;40

ಬೀದರ್‌–39

ಕಲಬುರ್ಗಿ–43

ಯಾದಗಿರಿ–42

ರಾಯಚೂರು–42

ಕೊಪ್ಪಳ–40

* ಬಿಸಿಲು ಹೆಚ್ಚೈತಿ. ಮಕ್ಕಳನ್ನು ಸಂಬಾಳಿಸೋದ್‌ ಕಷ್ಟವಾಗ್ತೈತಿ. ಏನ್‌ ಮಾಡ್ಬೇಕ್‌ ತೋಚ್ತಿಲ್ಲ. ವೈದ್ಯರಿಗೆ ತೋರಿಸಿದ್ರೂ ಪ್ರಯೋಜನಕ್ಕೆ ಬರ್ತಿಲ್ಲ

- ಜ್ಯೋತಿ, ಗೃಹಿಣಿ

* ವಾಂತಿ, ಚರ್ಮದ ಸಮಸ್ಯೆ, ತಲೆ ನೋವು– ಇನ್ನಿತರೆ ಸಮಸ್ಯೆ ಹೊತ್ತು ನಿತ್ಯ 10–15 ಮಂದಿ ಆಸ್ಪತ್ರೆಗೆ ಬರುತ್ತಿದ್ದಾರೆ

- ಡಾ.ಎಂ.ಎಂ.ಪಾಟೀಲ, ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT