ಮಂಗಳವಾರ, ಸೆಪ್ಟೆಂಬರ್ 28, 2021
22 °C
ಡಿಕೆಶಿ–ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ ವೈಎಎನ್‌ ತಿರುಗೇಟು

ಮದರಸ ಶಿಕ್ಷಣದ ಬಗ್ಗೆ ಚರ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಮಾತೃ ಭಾಷೆಗೆ ಕುತ್ತು ಎಂದು ವದಂತಿ ಹಬ್ಬಿಸುತ್ತಿರುವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮದರಸಗಳಲ್ಲಿ ಯಾವ ಭಾಷೆಯಲ್ಲಿ, ಏನು ಬೋಧನೆ ಮಾಡಲಾಗುತ್ತಿದೆ ಎಂಬ ಬಗ್ಗೆ ಚರ್ಚಿಸಿ ನಂತರ ಹೇಳಿಕೆ ನೀಡಲಿ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿರುಗೇಟು ನೀಡಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡ ಭಾಷೆಗೆ ಕುತ್ತು ಬಾರದು. ಆದರೆ, ಸುಳ್ಳುಗಳನ್ನು ಹತ್ತಾರು ಬಾರಿ ಹೇಳಿದರೆ ಸತ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ನಂಬಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ಸರ್ಕಾರ ಏಕಾಏಕಿ ತೀರ್ಮಾನ ಕೈಗೊಂಡಿಲ್ಲ. ಕಾರ್ಯಪಡೆ ರಚಿಸಿ ತಜ್ಞರು, ಪೋಷಕರೊಂದಿಗೆ ಹಲವಾರು ಬಾರಿ ಚರ್ಚಿಸಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ನೀತಿ ಜಾರಿಗೆ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಪದವಿ ದಾಖಲಾತಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ನಡೆಯುತ್ತಿದೆ. ಈ ನೀತಿಯಿಂದ ಕಲಿಕೆಯಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಸ್ವಾವಲಂಬಿ ಬಲಿಷ್ಠ ಭಾರತ ನಿರ್ಮಾಣದ ಪರಿಕಲ್ಪನೆಯ ಕನಸು ಹೊಂದಲಾಗಿದೆ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾಗ್ಪುರ ಶಿಕ್ಷಣ ನೀತಿ ಎಂದು ಜರಿದಿರುವ ಡಿ.ಕೆ.ಶಿವಕುಮಾರ್‌ರ ಹೇಳಿಕೆಗೆ ಪ್ರತಿಕ್ರಿಯಿಸಿ. ‘ನಾಗ್ಪುರ ನೀತಿ ರಾಷ್ಟ್ರ ಪ್ರೇಮ, ದೇಶಭಕ್ತಿಯ ನೀತಿ ಹೇಳಿಕೊಡುತ್ತದೆ. ಆದ್ದರಿಂದಲೇ ಈ ದೇಶಕ್ಕೆ ಇನ್ನೂ ಯಾವುದೇ ತೊಂದರೆಯಾಗಿಲ್ಲ. ಈ ನೀತಿ ಹೊರತಾಗಿರುವ ದೇಶಗಳಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬುದನ್ನು ಪಕ್ಕದ ದೇಶಗಳನ್ನು ನೋಡಿ ಅರ್ಥಮಾಡಿಕೊಳ್ಳಲಿ’ ಎಂದು ತಿಳಿಸಿದರು.

ನಗೆಪಾಟಲು: ‘ಮದರಸಗಳಲ್ಲಿ ಯಾವ ಭಾಷೆಯಲ್ಲಿ ಶಿಕ್ಷಣ ನೀಡುತ್ತಾರೆ, ದೇಶ ಪ್ರೇಮದ ಶಿಕ್ಷಣವೋ, ಬೇರೆ ಏನಾನ್ನಾದರೂ ಕಲಿಸುತ್ತಾರೋ ಎಂಬುದರ ಬಗ್ಗೆ ಚರ್ಚಿಸಿ, ಆತ್ಮಾವಲೋಕನ ಮಾಡಿಕೊಂಡು ನಂತರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಡ್ಡಿಪಡಿಸುವ ಪ್ರಯತ್ನ ಮಾಡಲಿ’ ಎಂದು ಕಿವಿಮಾತು ಹೇಳಿದರು.

‘ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ಯಾರನ್ನೋ ತೃಪ್ತಿಪಡಿಸಲು ಮಾತನಾಡಿದಂತಿದೆ. ವಾಸ್ತವಾಂಶ ಅರಿತು ಮಾತನಾಡಿದಂತೆ ಕಾಣುತ್ತಿಲ್ಲ. ಅವರಿಗೆ ತಾವು ಮಾತನಾಡುತ್ತಿದ್ದೇವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲು ಸಮಯವಿಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ಟೀಕಿಸುವುದೇ ತಮ್ಮ ಗುರಿ ಎಂಬಂತೆ ಮಾತನಾಡಿ ಜನರ ಬಳಿ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ’ ಎಂದು ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.