ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಗೆ ಕಾಲಿಟ್ಟ ಚರ್ಮ ಗಂಟು ರೋಗ

ರಾಸುಗಳಲ್ಲಿ ವೈರಾಣು ಪತ್ತೆ: ಹೈನೋದ್ಯಮದ ನಿದ್ದೆಗೆಡಿಸಿದ ಸೋಂಕು
Last Updated 24 ಸೆಪ್ಟೆಂಬರ್ 2020, 14:08 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ (ಲಂಫಿ ಸ್ಕಿನ್ ಡಿಸೀಸ್–Lumpy Skin Disease) ಕಾಣಿಸಿಕೊಂಡಿದ್ದು, ಈ ಸೋಂಕು ಹೈನೋದ್ಯಮದ ನಿದ್ದೆಗೆಡಿಸಿದೆ.

ಹೈನುಗಾರಿಕೆಯೇ ಜೀವಾಳವಾಗಿರುವ ಜಿಲ್ಲೆಯಲ್ಲಿ ಬಹುಪಾಲು ರೈತರು ಕೃಷಿಯ ಜತೆಗೆ ರಾಸುಗಳನ್ನು ಸಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 8.47 ಲಕ್ಷ ಜಾನುವಾರುಗಳಿದ್ದು, ರೈತ ಕುಟುಂಬಗಳಿಗೆ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ.

ಕೋವಿಡ್‌–19 ಹಾಗೂ ಲಾಕ್‌ಡೌನ್‌ ಹೊಡೆತದಿಂದ ಕಂಗಾಲಾಗಿರುವ ಅನ್ನದಾತರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹಸು ಮತ್ತು ಎಮ್ಮೆಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ರೋಗ ಪ್ರಮಾಣ ಹೆಚ್ಚುತ್ತಿದೆ. ಈ ಕಾಯಿಲೆ ಆಫ್ರಿಕಾ, ಮಧ್ಯಪ್ರಾಚ್ಯ, ದಕ್ಷಿಣ-ಪೂರ್ವ ಯುರೋಪ್, ರಷ್ಯಾ ಮತ್ತು ಕಜಕಿಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. 2019ರಲ್ಲಿ ದೇಶದ ಕೇರಳ ಮತ್ತು ಒಡಿಶಾ ರಾಜ್ಯದ ರಾಸುಗಳಿಗೆ ಈ ಕಾಯಿಲೆ ಬಂದಿತ್ತು.

ಆಗಸ್ಟ್‌ ತಿಂಗಳಲ್ಲಿ ರಾಜ್ಯದ ಕಲಬುರ್ಗಿ, ಯಾದಗಿರಿ, ಹಾಸನ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬೀದರ್‌, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಚರ್ಮ ಗಂಟು ರೋಗದ ಪ್ರಕರಣಗಳು ವರದಿಯಾಗಿದ್ದವು. ಇದೀಗ ಈ ರೋಗ ಜಿಲ್ಲೆಗೂ ಕಾಲಿಟ್ಟಿದ್ದು, ಗಡಿ ಭಾಗದ ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕಿನ ಹಲವೆಡೆ ರಾಸುಗಳಿಗೆ ರೋಗ ತಗುಲಿದೆ.

ಹರಡುವ ಪರಿ: ಸೊಳ್ಳೆ, ನೊಣ, ಉಣ್ಣೆ ಹಾಗೂ ರೋಗಪೀಡಿತ ಪ್ರಾಣಿಗಳ ನೇರ ಸಂಪರ್ಕದಿಂದ ಈ ರೋಗ ರಾಸುಗಳಿಗೆ ಹರಡುತ್ತದೆ. ಅಲ್ಲದೇ, ರೋಗದಿಂದ ಬಳಲುತ್ತಿರುವ ರಾಸುಗಳು ತಿಂದು ಬಿಟ್ಟ ಮೇವು ಮತ್ತು ಕುಡಿದು ಬಿಟ್ಟ ನೀರಿನ ಸೇವೆನೆಯಿಂದಲೂ ಈ ರೋಗ ಬರುತ್ತದೆ. ಜತೆಗೆ ಸೋಂಕಿತ ರಾಸುವಿನ ರಕ್ತ, ಕೀವು, ದೈಹಿಕ ಸ್ರಾವದ ನೇರ ಸಂಪರ್ಕದಿಂದಲೂ ಬರುತ್ತದೆ. ಆದರೆ, ಈ ರೋಗ ಮನುಷ್ಯರಿಗೆ ಹರಡುವುದಿಲ್ಲ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ.

ಕ್ಯಾಪ್ರೈನ್‌ ಪಾಕ್ಸ್‌ ವೈರಾಣುವಿನಿಂದ ಬರುವ ಈ ರೋಗವು ಕುರಿ ಮತ್ತು ಮೇಕೆಗಳಲ್ಲಿ ಸಿಡುಬಿನ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತದೆ. ರಾಸುಗಳ ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಯಲ್ಲಿ ಇರುವ ಈ ವೈರಾಣು 35 ದಿನಗಳ ಕಾಲ ಬದುಕಿರುತ್ತದೆ.

ರೋಗ ಲಕ್ಷಣ: ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವಾರದ ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದಲ್ಲಿ ತುರಿಕೆ ಆರಂಭವಾಗುತ್ತದೆ. ರೋಗ ಕಾಣಿಸಿಕೊಂಡ ಹಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ.

ಅತಿಯಾದ ಜ್ವರ, ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೈ ಮೇಲೆ ದೊಡ್ಡ ಗಂಟು ಬರುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಕೆಲ ರಾಸುಗಳು ಮೇವು ತಿನ್ನದೆ ಕ್ರಮೇಣ ಬಡಕಲಾಗುತ್ತವೆ. ತಳಿ ಸಂವರ್ಧನೆ ಹೋರಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು.

ಗರ್ಭ ಧರಿಸಿದ ಹಸುಗಳಲ್ಲಿ ಗರ್ಭಪಾತವಾಗಿ, ದೀರ್ಘ ಕಾಲದವರೆಗೆ ಗರ್ಭ ಧರಿಸದಂತೆ ಆಗಬಹುದು. ಅಲ್ಲದೇ, ಮಾಸು ಚೀಲದ ಮೂಲಕ ರೋಗ ಪ್ರಸರಣದ ಸಾಧ್ಯತೆಯಿದೆ. ರೋಗಕ್ಕೆ ಶೀಘ್ರವೇ ಚಿಕಿತ್ಸೆ ಕೊಡಿಸದಿದ್ದರೆ ಗಂಟುಗಳು ಕೊಳೆತು, ನೊಣ ಮತ್ತು ಉಣ್ಣೆ ಕಡಿತದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. ರೋಗದ ಸ್ಥಿತಿ ಗಂಭೀರವಾದರೆ ರಾಸುಗಳು ಸಾವು ಸಂಭವಿಸಬಹುದು.

ಚಿಕಿತ್ಸೆ ಏನು?: ರೋಗಪೀಡಿತ ರಾಸುಗಳನ್ನು ಆರೋಗ್ಯವಂತ ರಾಸುಗಳಿಂದ ಪ್ರತ್ಯೇಕಿಸಬೇಕು. ರಾಸುಗಳಿಗೆ ಸೊಳ್ಳೆ, ನೊಣ, ಮತ್ತು ಉಣ್ಣೆ ನಿವಾರಕ ಮುಲಾಮು ಹಚ್ಚಬೇಕು. ರಾಸುಗಳಿಗೆ ಕಡ್ಡಾಯವಾಗಿ ಮೇಕೆ ಸಿಡುಬು (ಗೋಟ್ ಪಾಕ್ಸ್‌) ನಿರೋಧಕ ಲಸಿಕೆ ಹಾಕಿಸಬೇಕು.

ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬಹುದು. ಟೆಟ್ರಾ ಸೈಕ್ಲಿನ್‌, ಪೆನ್ಸಿಲಿನ್‌ನಂತಹ ಆ್ಯಂಟಿ ಬಯೋಟಿಕ್‌ ಚುಚ್ಚುಮದ್ದು ನೀಡಬಹುದು. ರೋಗ ಹತೋಟಿಗಾಗಿ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ರಾಸುಗಳಿಗೆ ಮೇಕೆ ಸಿಡುಬು ಲಸಿಕೆ ಹಾಕಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT