ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ಟೊಮೆಟೊಗೆ ಅಂಗಮಾರಿ ಕಾಟ: ರೈತರು ಕಂಗಾಲು

ವಾತಾವರಣದಲ್ಲಿ ತೇವಾಂಶ ಹೆಚ್ಚಳ: ಟೊಮೆಟೊ– ಆಲೂಗಡ್ಡೆ ಬೆಳೆಗೆ ರೋಗಬಾಧೆ
Last Updated 3 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಅಂಗಮಾರಿ ರೋಗ ತಗುಲಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ ₹ 200 ಕೋಟಿಗೂ ಹೆಚ್ಚು ಟೊಮೆಟೊ ವಹಿವಾಟು ನಡೆಯತ್ತದೆ.

ಜಿಲ್ಲೆಯಿಂದ ರಾಜಸ್ತಾನ, ಕೇರಳ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ, ಜಾರ್ಖಂಡ್‌, ಒಡಿಶಾ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ರಫ್ತಾಗುತ್ತದೆ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹಿಂಗಾರು ಹಂಗಾಮಿನಲ್ಲಿ 15 ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಹೀಗಾಗಿ ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಿದ್ದು, ಟೊಮೆಟೊ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ.

ಬಹುತೇಕ ತಾಲ್ಲೂಕುಗಳಲ್ಲಿ ಟೊಮೆಟೊ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಅಂಗಮಾರಿ ರೋಗಬಾಧಿತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿದ್ದು, ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಕಾಯಿಗಳು ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ.

ಟೊಮೆಟೊ ಜತೆಗೆ ಆಲೂಗಡ್ಡೆ ಹಾಗೂ ದಪ್ಪ ಮೆಣಸಿನಕಾಯಿ ಬೆಳೆಗೂ ಅಂಗಮಾರಿ ರೋಗ ತಗುಲಿದೆ. ಅಂಗಮಾರಿ ರೋಗಕ್ಕೆ ಕಾರಣವಾಗಿರುವ ಶಿಲೀಂಧ್ರಗಳು ಎಲೆಗಳನ್ನು ತಿನ್ನುತ್ತಿದ್ದು, ಕಾಂಡದ ಭಾಗ ಕೊಳೆತು ಗಿಡಗಳು ಸೊರಗುತ್ತಿವೆ. ಅಕ್ಟೋಬರ್‌ ಆರಂಭದಲ್ಲಿ ಊಜಿ ನೊಣದ ಹಾವಳಿಯಿಂದ ಸಾಕಷ್ಟು ಬೆಳೆ ನಾಶವಾಗಿ ನಷ್ಟ ಅನುಭವಿಸಿದ್ದ ಟೊಮೆಟೊ ಬೆಳೆಗಾರರಿಗೆ ಇದೀಗ ಅಂಗಮಾರಿ ರೋಗ ದೊಡ್ಡ ಪೆಟ್ಟು ಕೊಟ್ಟಿದೆ.

ಹತೋಟಿಗೆ ಬರುತ್ತಿಲ್ಲ: ರೈತರು ಬೆಳೆಗೆ ವಿವಿಧ ಬಗೆಯ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನುಗಳ ಟೊಮೆಟೊ ಬೆಳೆಗೂ ರೋಗ ಹಬ್ಬುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಮೋಡ ಮುಸುಕಿದ ವಾತಾವರಣ ಹಾಗೂ ಜಡಿ ಮಳೆ ಮುಂದುವರಿದರೆ ಅಂಗಮಾರಿ ರೋಗ ಮತ್ತಷ್ಟು ಉಲ್ಬಣಗೊಂಡು ಟೊಮೆಟೊ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT