ಸೋಮವಾರ, ಅಕ್ಟೋಬರ್ 21, 2019
26 °C

ತಲಗುಂದ ಶಾಲೆ ಜಾಗದ ವಿವಾದ ಇತ್ಯರ್ಥ

Published:
Updated:
Prajavani

ಕೋಲಾರ: ತಾಲ್ಲೂಕಿನ ತಲಗುಂದ ಗ್ರಾಮದಲ್ಲಿನ ಸರ್ಕಾರಿ ಶಾಲಾ ಕಟ್ಟಡ ಹಾಗೂ ಜಾಗದ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದ್ದು, ಜಿಲ್ಲಾಧಿಕಾರಿ ಆದೇಶದಂತೆ ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ಜಾಗದ ಸರ್ವೆ ಮಾಡಿ ಗಡಿ ಗುರುತಿಸಿ ವಶಕ್ಕೆ ಪಡೆದರು.

ನ್ಯಾಯಾಲಯದ ಆದೇಶದಂತೆ ಹೈದರ್‌ ಸಾಬಿ ಹಾಗೂ ಇತರರು ಜಾಗವನ್ನು ಶಾಲೆಗೆ ಬಿಟ್ಟುಕೊಟ್ಟಿದ್ದು, ಹಲವು ವರ್ಷಗಳ ಜಮೀನು ವಿವಾದ ಬಗೆಹರಿದಿದೆ.

ಗ್ರಾಮದ ಸರ್ವೆ ನಂಬರ್‌ 164ರಲ್ಲಿ 34 ಗುಂಟೆ ಹಾಗೂ ಸರ್ವೆ ನಂಬರ್‌ 165ರಲ್ಲಿ 3 ಗುಂಟೆ ಸರ್ಕಾರಿ ಜಮೀನು ಇದ್ದು, ಅದನ್ನು ಶಾಲೆಯ ವಶಕ್ಕೆ ಪಡೆಯಲಾಯಿತು. ಸರ್ವೆಯರ್‌ ಮಹೇಶ್, ಕಂದಾಯ ವೃತ್ತ ನಿರೀಕ್ಷಕ ಮಂಜುನಾಥ್ ಜಾಗದ ಸರ್ವೆ ಮಾಡಿ ಗುರುತಿಸಿದರು.

ಸರ್ವೆ ನಂಬರ್‌ 164 ಮತ್ತು 165ರಲ್ಲಿನ 34 ಗುಂಟೆ ಜಾಗದ ಜತೆಗೆ 3 ಗುಂಟೆ ಸರ್ಕಾರಿ ಜಮೀನು ಸಹ ಸರ್ಕಾರದ ಆದೇಶದಂತೆ ಶಾಲೆಗೆ ಸೇರಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಪತ್ರ ನೀಡುವಂತೆ ಶಾಲೆ ಮುಖ್ಯ ಶಿಕ್ಷಕರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕೆಂದು ನಿರ್ಧರಿಸಲಾಯಿತು.

ಗ್ರಾ.ಪಂ ವತಿಯಿಂದ ನರೇಗಾ ಅಡಿ ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಲು ಸೂಚಿಸಲಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕ್ರಿಯಾಯೋಜನೆ ಸಿದ್ಧಪಡಿಸಲು ತೀರ್ಮಾನಿಸಲಾಯಿತು. ಸರ್ವಶಿಕ್ಷಣ ಅಭಿಯಾನದ ಉಳಿಕೆ ಹಣದಲ್ಲಿ ಶೌಚಾಲಯ ಹಾಗೂ ಇತರ ಕಟ್ಟಡ ನಿರ್ಮಿಸಲು ನಿರ್ಧರಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಪಾಷಾ, ಶಾಲೆ ಮುಖ್ಯ ಶಿಕ್ಷಕ ವೆಂಕಟೇಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು ಹಾಜರಿದ್ದರು.

Post Comments (+)