ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ನೀರು ಘಟಕಕ್ಕೆ ಶಿಸ್ತುಕ್ರಮದ ಬಿಸಿ

ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂಗೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳ ಪತ್ರ
Last Updated 23 ಫೆಬ್ರುವರಿ 2019, 12:54 IST
ಅಕ್ಷರ ಗಾತ್ರ

ಕೋಲಾರ: ಭಾರತೀಯ ಮಾನಕ ಸಂಸ್ಥೆಯ (ಐಎಸ್‌ಐ) ಗುರುತು ಇಲ್ಲದ ಕುಡಿಯುವ ನೀರಿನ ಮಾರಾಟ ದಂಧೆಗೆ ಕಡಿವಾಣ ಹಾಕಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಅನಧಿಕೃತ ನೀರು ಘಟಕಗಳ ಮೇಲೆ ಶಿಸ್ತುಕ್ರಮದ ಚಾಟಿ ಬೀಸಿದೆ.

ಹಾದಿ ಬೀದಿಯಲ್ಲಿ ಕುಡಿಯುವ ನೀರು ಮಾರಾಟ ಮಳಿಗೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ಕಳಪೆ ನೀರಿನ ಮಾರಾಟ ಎಗ್ಗಿಲ್ಲದೆ ಸಾಗಿದೆ. ಘಟಕಗಳ ಮಾಲೀಕರು ಪರವಾನಗಿ ಪಡೆಯದೆ ಮತ್ತು ಮಾನದಂಡ ಪಾಲಿಸದೆ ನೀರು ಉತ್ಪಾದಿಸಿ ಅಂಗಡಿಗಳಿಗೆ ಮಾರುತ್ತಿದ್ದಾರೆ. ಮತ್ತೊಂದೆಡೆ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿಕೊಂಡು ಬಂದು ಮನೆ ಮನೆಗೂ ಮಾರುತ್ತಿದ್ದಾರೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 90 ನೀರು ಉತ್ಪಾದನಾ ಘಟಕಗಳಿವೆ. ಈ ಪೈಕಿ 20 ಘಟಕಗಳ ಮಾಲೀಕರು ಮಾತ್ರ ಪರವಾನಗಿ ಪಡೆದು ಐಎಸ್‌ಐ ಮತ್ತು ಎಫ್‌ಎಸ್‌ಎಸ್‌ಎಐ ಮಾನದಂಡದ ಪ್ರಕಾರ ನೀರಿನ ವಹಿವಾಟು ನಡೆಸುತ್ತಿದ್ದಾರೆ. ಉಳಿದ 70 ಘಟಕಗಳು ಅನಧಿಕೃತವಾಗಿವೆ.

ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಐಎಸ್‌ಐ, ಎಫ್‌ಎಸ್‌ಎಸ್‌ಎಐ, ನಗರಸಭೆ ಹಾಗೂ ಆರೋಗ್ಯ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರವಾನಗಿಗೆ ಕನಿಷ್ಠ ₹ 1.15 ಲಕ್ಷ ಶುಲ್ಕ ಪಾವತಿಸಬೇಕು. ಘಟಕದಲ್ಲಿ ಉತ್ಪಾದಿಸುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಶುಲ್ಕ ನಿಗದಿಯಾಗುತ್ತದೆ.

ಪರವಾನಗಿ ಪಡೆದ ನಂತರ ಪ್ರತಿ ವರ್ಷ ಅದನ್ನು ನವೀಕರಿಸಿಕೊಳ್ಳಬೇಕು. ಐಎಸ್‌ಐ, ಎಫ್‌ಎಸ್‌ಎಸ್‌ಎಐ, ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಪ್ರತಿ ವರ್ಷ ಘಟಕಗಳನ್ನು ಪರಿಶೀಲಿಸಿ ನೀರಿನ ಗುಣಮಟ್ಟ ದೃಢೀಕರಿಸಬೇಕು. ಮಾಲೀಕರು ಪರವಾನಗಿ ನವೀಕರಣಕ್ಕೆ ಪ್ರತಿ ವರ್ಷ ಶುಲ್ಕ ಪಾವತಿಸಬೇಕು.

ಮಾನದಂಡ: ನೀರಿನ ಘಟಕ ಸ್ವಚ್ಛತೆಯಿಂದ ಕೂಡಿರಬೇಕು. ಕೊಳವೆ ಬಾವಿಯು ಚರಂಡಿ, ತ್ಯಾಜ್ಯ ವಸ್ತುಗಳನ್ನು ಶೇಖರಿಸುವ ಸ್ಥಳದಲ್ಲಿ ಇರಬಾರದು. ನೀರು ತುಂಬಿಸುವ ಕ್ಯಾನ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಘಟಕದ ಎಲ್ಲಾ ಹಂತಗಳಲ್ಲೂ ಸ್ಟೀಲ್‌ ಉಪಕರಣ ಬಳಸಬೇಕು. ಶುದ್ಧೀಕರಣ ಹಂತದಲ್ಲಿ ಕಾರ್ಬನ್ ಫಿಲ್ಟರ್, ಮೈಕ್ರೊ ಫಿಲ್ಟರ್ ಬಳಸಿ ದಾಖಲು ಮಾಡಬೇಕು.

ಓಜೋನಿಕರಣ ಪ್ರಕ್ರಿಯೆಯನ್ನು ಸೂಕ್ತವಾಗಿ ಮಾಡಬೇಕು. ಪ್ರಯೋಗಾಲಯ ತಂತ್ರಜ್ಞರನ್ನು ನೇಮಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕ್ಯಾನ್ ಮೇಲಿನ ಲೇಬಲ್‌ನಲ್ಲಿ ಬ್ಯಾಚ್ ನಂಬರ್, ದಿನಾಂಕ, ಉಪಯೋಗಿಸುವ ವಾಯಿದೆ, ಪೂರ್ಣ ವಿಳಾಸ, ಐಎಸ್‍ಐ ಪರವಾನಗಿ ಸಂಖ್ಯೆ, ಎಫ್‍ಎಸ್‍ಎಸ್‍ಎಐ ಪರವಾನಗಿ ಸಂಖ್ಯೆ ಮುದ್ರಿಸಿ ಸೀಲ್ ಮಾಡಿರಬೇಕು. ಪರವಾನಗಿ ಪಡೆದು ಈ ಎಲ್ಲಾ ಮಾನದಂಡಗಳೊಂದಿಗೆ ಘಟಕ ತೆರೆಯಲು ಕನಿಷ್ಠ ₹ 30 ಲಕ್ಷ ಬಂಡವಾಳ ಬೇಕಾಗುತ್ತದೆ.

ಘಟಕಗಳ ಮಾಲೀಕರು ಪರವಾನಗಿ ಶುಲ್ಕ ಉಳಿಸಲು ಮತ್ತು ಘಟಕಕ್ಕೆ ತಗುಲುವ ವೆಚ್ಚ ಕಡಿಮೆ ಮಾಡಲು ಕಳ್ಳದಾರಿ ಹಿಡಿದಿದ್ದಾರೆ. ಈ ಘಟಕಗಳಿಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದರೂ ಕದ್ದು ಮುಚ್ಚಿ ಕಳಪೆ ನೀರು ಮಾರಾಟ ದಂಧೆ ನಡೆಯುತ್ತಿದೆ.

ಆರೋಗ್ಯ ಸಮಸ್ಯೆ: ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಅನಧಿಕೃತ ಘಟಕಗಳ ವಿರುದ್ಧ ಪ್ರಕರಣ ದಾಖಲಿಸಿ ₹ 75 ಸಾವಿರ ದಂಡ ಸಂಗ್ರಹಿಸಿದ್ದಾರೆ. ಆದರೂ ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿರುವ ಈ ದಂಧೆಯಿಂದ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದ್ದು, ಚರ್ಮ ರೋಗ, ತಲೆಗೂದಲು ಉದುರುವಿಕೆ, ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಹೀಗಾಗಿ ಕಠಿಣ ಕ್ರಮಕ್ಕೆ ಮುಂದಾಗಿರುವ ಅಧಿಕಾರಿಗಳು ಅಕ್ರಮ ಘಟಕಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂಗೆ ಪತ್ರ ಬರೆದಿದ್ದಾರೆ. ಘಟಕಗಳಿಗೆ ವಿದ್ಯುತ್‌ ಪೂರೈಕೆಯಾಗದಿದ್ದರೆ ಕಳಪೆ ನೀರಿನ ಉತ್ಪಾದನೆಯೇ ಸ್ಥಗಿತಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT