ಶನಿವಾರ, ಏಪ್ರಿಲ್ 4, 2020
19 °C

21 ದಿನಕ್ಕೆ ಆಹಾರ ಪದಾರ್ಥ ವಿತರಿಸಿ: ಶಾಲಾ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿರುವುದರಿಂದ ಶಾಲಾ ಮಕ್ಕಳ ಬಿಸಿಯೂಟಕ್ಕೆ 21 ದಿನಗಳಿಗೆ ಆಗುವಷ್ಟು ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಂದೇ ಬಾರಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ ಎಂದು ಡಿಡಿಪಿಐ ಕೆ.ರತ್ನಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌–19 ಭೀತಿಯಿಂದಾಗಿ 1ರಿಂದ 6ನೇ ತರಗತಿ ಮಕ್ಕಳಿಗೆ ರಜೆ, 7ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷಾ ಪೂರ್ವಸಿದ್ಧತಾ ರಜೆ ಘೋಷಿಸಲಾಗಿದೆ. ಆಹಾರ ಭದ್ರತಾ ಕಾಯ್ದೆ 2015ರ ನಿಯಮ 9ರನ್ವಯ ಪ್ರತಿ ಮಗುವಿಗೂ ಮಧ್ಯಾಹ್ನದ ಬಿಸಿಯೂಟಕ್ಕಾಗಿ ದಿನವೊಂದಕ್ಕೆ ನಿಗದಿಯಾದ ಆಹಾರ ಪ್ರಮಾಣವನ್ನು ಲೆಕ್ಕಾಚಾರ ಮಾಡಿ ಅಕ್ಕಿ ಮತ್ತು ತೊಗರಿ ಬೇಳೆ ಒಟ್ಟಿಗೆ ಕೊಡಬೇಕು ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಬರುವ ಹಲವು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬದವರಾಗಿದ್ದು, ಶಾಲೆಯಲ್ಲಿ ನೀಡುವ ಬಿಸಿಯೂಟವು ಅವರ ಪೌಷ್ಟಿಕತೆ ಹಾಗೂ ಆರೋಗ್ಯ ಕಾಪಾಡಲು ಅತ್ಯಗತ್ಯ. ಹೀಗಾಗಿ ರಜೆ ಅವಧಿಯಲ್ಲೂ ಬಿಸಿಯೂಟ ಮುಂದುವರಿಸುವಂತೆ ಪೋಷಕರು ಮನವಿ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಿಸುವ ಸಂಬಂಧ ಆರೋಗ್ಯ ಇಲಾಖೆಯ ಸಲಹೆ ಕೋರಲಾಗಿತ್ತು. ಮಕ್ಕಳು ಬಿಸಿಯೂಟಕ್ಕಾಗಿ ಗುಂಪಾಗಿ ಶಾಲೆಗೆ ಬರುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿ ಶಾಲೆಯಲ್ಲಿ ಊಟ ವಿತರಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದು ವಿವರಿಸಿದ್ದಾರೆ.

ಆಹಾರ ಭದ್ರತಾ ಕಾಯ್ದೆ ಅನ್ವಯ ಮಕ್ಕಳಿಗೆ ಆಹಾರ ಧಾನ್ಯಗಳ ಪ್ರಮಾಣದ ವೆಚ್ಚ ಹಾಗೂ ಪರಿವರ್ತನಾ ವೆಚ್ಚ ಸೇರಿಸಿ ಅಕ್ಕಿ, ತೊಗರಿ ಬೇಳೆಯನ್ನು ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಏ.10ರವರೆಗೂ ಒಟ್ಟು 21 ದಿನಗಳಿಗೆ ಒಂದೇ ಬಾರಿಗೆ ವಿತರಿಸಲು ಪ್ರತಿ ಶಾಲೆಯ ಮುಖ್ಯ ಶಿಕ್ಷಕರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಸಹಿ ಪಡೆಯಿರಿ

1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪ್ರತಿ ಮಗುವಿಗೆ ದಿನಕ್ಕೆ 100 ಗ್ರಾಂ ಅಕ್ಕಿ, 50 ಗ್ರಾಂ ತೊಗರಿ ಬೇಳೆ ಹಾಗೂ 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳಿಗೆ ದಿನವೊಂದಕ್ಕೆ 150 ಗ್ರಾಂ ಅಕ್ಕಿ, 75 ಗ್ರಾಂ ತೊಗರಿ ಬೇಳೆ ವಿತರಿಸಬೇಕು. ಆಹಾರ ಪದಾರ್ಥ ವಿತರಣೆ ದಾಖಲೆಪುಸ್ತಕದಲ್ಲಿ ಮಕ್ಕಳ ತರಗತಿ ನಮೂದಿಸಿ ಪೋಷಕರಿಂದ ಸ್ವೀಕೃತಿ ಸಹಿ ಪಡೆಯಬೇಕು ಎಂದು ಸೂಚನೆ ನೀಡಿದ್ದಾರೆ.

ಮಕ್ಕಳಿಗೆ ಆಹಾರ ಪದಾರ್ಥ ವಿತರಿಸಲು ಶಾಲೆ ಉಗ್ರಾಣದಲ್ಲಿ ಅಕ್ಕಿ ಮತ್ತು ತೊಗರಿ ಬೇಳೆ ಲಭ್ಯತೆ ಇಲ್ಲದಿದ್ದರೆ ಸಂಬಂಧಪಟ್ಟ ಅಕ್ಷರ ದಾಸೋಹ ಯೋಜನೆ ತಾಲ್ಲೂಕು ಸಹಾಯಕ ನಿರ್ದೇಶಕರ ಗಮನಕ್ಕೆ ತರಬೇಕು. ಅಗತ್ಯ ಆಹಾರ ಪದಾರ್ಥಗಳು ಸರಬರಾಜಾಗುವಂತೆ ಮುಖ್ಯ ಶಿಕ್ಷಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ವರದಿ ಸಲ್ಲಿಸಬೇಕು

ಆಹಾರ ಸಾಮಗ್ರಿ ವಿತರಣೆಯಲ್ಲಿ ಅಡುಗೆ ಸಿಬ್ಬಂದಿ ತೊಡಗಿಸಿಕೊಳ್ಳಬೇಕು ಮತ್ತು ಅವರಿಗೆ ನಿಯಮಾನುಸಾರ ಏ.10ರವರೆಗೆ ತಿಂಗಳ ಸಂಭಾವನೆ ಪಾವತಿಸಬೇಕು. ಸ್ವಯಂ ಸೇವಾ ಸಂಸ್ಥೆಗಳು ಬಿಸಿಯೂಟ ಯೋಜನೆ ವ್ಯಾಪ್ತಿಯ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಸಾಮಗ್ರಿ ಸರಬರಾಜು ಮಾಡಬಹುದು ಎಂದು ಹೇಳಿದ್ದಾರೆ.

ಆಹಾರ ಪದಾರ್ಥಗಳ ವಿತರಣೆಯನ್ನು ಸಂಬಂಧ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದು ವಿತರಣಾ ವಹಿಯಲ್ಲಿ ಅವರ ಸಹಿಯನ್ನು ಪೋಷಕರೊಂದಿಗೆ ಪಡೆಯಬೇಕು. ಶಾಲಾ ಮುಖ್ಯ ಶಿಕ್ಷಕರು ಆಹಾರ ಧಾನ್ಯ ವಿತರಣೆ ಸಂಬಂಧ 7 ದಿನದೊಳಗೆ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು