ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ನೀರು ಬಿಸ್ಕೆಟ್ ವಿತರಣೆ

Last Updated 28 ಮಾರ್ಚ್ 2020, 13:40 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕು ತಡೆಗೆ ಕೇಂದ್ರ ಸರ್ಕಾರ ಘೋಷಿಸಿರುವ ದಿಗ್ಬಂಧನ ಆದೇಶದ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಸದಸ್ಯರು ನಗರದಲ್ಲಿ ಶನಿವಾರ ಮುಖಗವಸು, ಕುಡಿಯುವ ನೀರು ಹಾಗೂ ಬಿಸ್ಕೆಟ್‌ ವಿತರಿಸಿದರು.

ದಿಗ್ಬಂಧನದ ನಡುವೆಯೂ ವಿನಾಕಾರಣ ರಸ್ತೆಗಳಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಮನೆಗಳಲ್ಲೇ ಇರುವಂತೆ ಸಂಘದ ಸದಸ್ಯರು ಜಾಗೃತಿ ಮೂಡಿಸಿದರು. ಕೊರೊನಾ ಸೋಂಕು ತಡೆಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ನೆರವಿಗೆ ಧಾವಿಸಲು ತಾವು ಸಿದ್ಧವೆಂಬ ಸಂದೇಶ ರವಾನಿಸಿದರು.

ನಗರದ ಟೇಕಲ್ ರಸ್ತೆ, ಕ್ಲಾಕ್‌ಟವರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಎಂ.ಬಿ.ರಸ್ತೆ, ಮೆಕ್ಕೆ ವೃತ್ತ, ಕಾಲೇಜು ವೃತ್ತ, ಬಂಗಾರಪೇಟೆ ವೃತ್ತ ಹಾಗೂ ಸುತ್ತಮುತ್ತ ಸಂಚರಿಸಿದ ಸಂಘದ ಸದಸ್ಯರು ಕೊರೊನಾ ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಿದರು.

‘ಆರೋಗ್ಯ ಇಲಾಖೆ ಸಿಬ್ಬಂದಿಯಂತೆಯೇ ಪೊಲೀಸರು ಕೊರೊನಾ ಸೋಂಕು ತಡೆಗೆ ದಿನದ 24 ತಾಸೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಜನಪರ ಕಾಳಜಿ ಶ್ಲಾಘನೀಯ. ಪೊಲೀಸರಿಗೆ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ’ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಯುವಕರು ದಿಗ್ಬಂಧನದ ಆದೇಶ ಗಂಭೀರವಾಗಿ ಪರಿಗಣಿಸದೆ ವಿನಾಕಾರಣ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯುವಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ವಿನಾಕಾರಣ ಮನೆಯಿಂದ ಹೊರ ಬಂದು ರಸ್ತೆಗಳಲ್ಲಿ ಅಲೆದಾಡಬಾರದು’ ಎಂದು ಮನವಿ ಮಾಡಿದರು.

ಸೇವೆ ಗೌರವಿಸಿ

‘ಪೊಲೀಸ್ ಸಿಬ್ಬಂದಿಯು ಲಾಠಿ ಹಿಡಿದು ರಸ್ತೆಗಳಲ್ಲಿ ಗಸ್ತು ನಡೆಸುತ್ತಾ ಮೂಲಕ ರಸ್ತೆಗಿಳಿಯುವ ಮಂದಿಯನ್ನು ಮನೆಗೆ ಕಳುಹಿಸುತ್ತಿದ್ದಾರೆ. ಹೋಟೆಲ್, ಅಂಗಡಿಗಳು ಮುಚ್ಚಿರುವುದರಿಂದ ಪೊಲೀಸರಿಗೆ ಕುಡಿಯುವ ನೀರು ಮತ್ತು ಊಟ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾಗರೀಕರು ಅವರ ಸೇವೆ ಗೌರವಿಸಬೇಕು’ ಹೇಳಿದರು.

ಮುಖಗವಸು ಧರಿಸದೆ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದವರನ್ನು ಸಂಘದ ಸದಸ್ಯರು ತಡೆದು ಮುಖಗವಸು ವಿತರಿಸಿದರು. ಸಂಘದ ಪದಾಧಿಕಾರಿ ಅಬ್ರಾರ್ ಉಲ್ಲಾಖಾನ್, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT