ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ: ರಾಜ್ಯ ಮಟ್ಟದಲ್ಲಿ ಕೋಲಾರ ಜಿಲ್ಲೆಗೆ 18ನೇ ಸ್ಥಾನ

Last Updated 15 ಏಪ್ರಿಲ್ 2019, 15:34 IST
ಅಕ್ಷರ ಗಾತ್ರ

ಅಂಕಿ ಅಂಶ.....
* ಶೇ 65.19 ಫಲಿತಾಂಶ ಸಾಧನೆ

* 13,866 ಹೊಸ ಅಭ್ಯರ್ಥಿಗಳು

* 2,790 ಪುನರಾವರ್ತಿತ ವಿದ್ಯಾರ್ಥಿಗಳು

* 476 ಮಂದಿ ಖಾಸಗಿ ಅಭ್ಯರ್ಥಿಗಳು

ಕೋಲಾರ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯು ಶೇ 65.19 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 18ನೇ ಸ್ಥಾನ ಪಡೆದಿದೆ.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 66.51 ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 18ನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟಾರೆ ಫಲಿತಾಂಶದಲ್ಲಿ ಕೊಂಚ ಇಳಿಕೆಯಾದರೂ ಜಿಲ್ಲಾವಾರು ಪಟ್ಟಿಯಲ್ಲಿ ಜಿಲ್ಲೆಯು ಅದೇ ಸ್ಥಾನ ಉಳಿಸಿಕೊಂಡಿದೆ.

ಜಿಲ್ಲೆಯಿಂದ ಈ ಬಾರಿ 6,601 ಮಂದಿ ಬಾಲಕರು ಮತ್ತು 7,265 ಬಾಲಕಿಯರು 13,866 ಮಂದಿ ಹೊಸ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಪುನರಾವರ್ತಿತ ಅಭ್ಯರ್ಥಿಗಳಲ್ಲಿ 1,760 ಬಾಲಕರು ಮತ್ತು 1,030 ಬಾಲಕಿಯರು ಸೇರಿದಂತೆ 2,790 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಖಾಸಗಿಯಾಗಿ 312 ಬಾಲಕರು ಮತ್ತು 164 ಬಾಲಕಿಯರು ಸೇರಿದಂತೆ 476 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು.

ಈ ಬಾರಿ ರಾಜ್ಯ ಮಟ್ಟದ ಫಲಿತಾಂಶ ಸರಾಸರಿ ಶೇ 61.73 ಇದ್ದು, ಜಿಲ್ಲೆಯು ಶೇ 65.19ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಬಾಲಕಿಯರ ಮುನ್ನಡೆ: ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧಕರಾಗಿ ಹೊರಹೊಮ್ಮಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮುಳಬಾಗಿಲು ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಆರ್.ಹೇಮಾವತಿ 588 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ನಗರದ ಸಹ್ಯಾದ್ರಿ ಕಾಲೇಜಿನ ಅಭಿಲಾಷ್ ಮತ್ತು ಶ್ರೀವಿಷ್ಣು ತಲಾ 586 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಬಂಗಾರಪೇಟೆಯ ಎಸ್‌ಡಿಸಿ ಕಾಲೇಜಿನ ಎಂ.ಸ್ಫೂರ್ತಿ ಹಾಗೂ ನಗರದ ಮಹಿಳಾ ಸಮಾಜ ಕಾಲೇಜಿನ ಎನ್.ಎಸ್.ಅನೂಷಾ 587 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.

ಸ್ಫೂರ್ತಿ ಅವರು ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರದಲ್ಲಿ ಶೇ 100 ಅಂಕ ಗಳಿಸಿದ್ದಾರೆ. ಉಳಿದಂತೆ ವಾಣಿಜ್ಯ ಶಾಸ್ತ್ರದಲ್ಲಿ 96 , ಕನ್ನಡದಲ್ಲಿ 97 ಹಾಗೂ ಇಂಗ್ಲಿಷ್‌ನಲ್ಲಿ 94 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ರಾಜ್ಯ ಮಟ್ಟದಲ್ಲಿ 10ನೇ ರ‍‍್ಯಾಂಕ್ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಎಸ್.ಸಿರೀಷಾ 544 ಅಂಕ ಹಾಗೂ ಮಧುಮತಿ 539 ಅಂಕ ಪಡೆದು ಜಿಲ್ಲೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಅತ್ಯುನ್ನತ ಶ್ರೇಣಿ: ನಗರದ ಸಹ್ಯಾದ್ರಿ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ 98ರಷ್ಟು ಫಲಿತಾಂಶ ಲಭ್ಯವಾಗಿದ್ದು, 136 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ವಿಷಯದಲ್ಲಿ 586 ಅಂಕ ಗಳಿಸಿ ಕಾಲೇಜಿಗೆ ಮೊದಲಿಗರಾಗಿದ್ದಾರೆ.

ಕಾಲೇಜಿನಲ್ಲಿ 449 ಮಂದಿ ಪರೀಕ್ಷೆಗೆ ಕುಳಿತಿದ್ದು, ಈ ಪೈಕಿ 439 ಮಂದಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಭಿಲಾಷ್ ಮತ್ತು ವಿಷ್ಣು 586 ಅಂಕ ಗಳಿಸಿ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಉಳಿದಂತೆ ಎಸ್.ಮಹೇಶ್ 581 ಅಂಕ, ಎಚ್‌.ಯಾದವ್ 581 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಶೇ 100 ಫಲಿತಾಂಶ ಬಂದಿದೆ. ಕಾಲೇಜಿನ ವಿದ್ಯಾರ್ಥಿನಿ ಅತೀಬಾ ಕೌಸರ್ ಹಾಗೂ ಕೆ.ಎನ್.ವಿದ್ಯಾಶ್ರೀ 577 ಅಂಕ ಗಳಿಸಿದ್ದಾರೆ. 42 ವಿದ್ಯಾರ್ಥಿಗಳು ಶೇ 100 ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT