ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಸೋಲು– ಗೆಲುವು ನಿರ್ಧರಿಸಿದ ಮತದಾರ

ಜಿಲ್ಲೆಯ 3 ನಗರಸಭೆ ಚುನಾವಣೆ: ಶಾಂತಿಯುತ ಮತದಾನ
Last Updated 12 ನವೆಂಬರ್ 2019, 16:49 IST
ಅಕ್ಷರ ಗಾತ್ರ

ಕೋಲಾರ: ಸಣ್ಣ ಪುಟ್ಟ ಗೊಂದಲ ಹೊರತುಪಡಿಸಿದರೆ ಜಿಲ್ಲೆಯ 3 ನಗರಸಭೆಗಳ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆದಿದ್ದು, ಶೇ 67.73ರಷ್ಟು ಮತದಾನವಾಗಿದೆ.

ಕೆಲ ಮತಗಟ್ಟೆಗಳಲ್ಲಿ ಬೆಳಿಗ್ಗೆ ಮತದಾನದ ಆರಂಭದಲ್ಲೇ ವಿದ್ಯುನ್ಮಾನ ಮತ ಯಂತ್ರಗಳಲ್ಲಿ (ಇವಿಎಂ) ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹೀಗಾಗಿ ಸಕಾಲಕ್ಕೆ ಮತದಾನ ಆರಂಭವಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಮತದಾರರು ಮತಗಟ್ಟೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮತಗಟ್ಟೆ ಸಿಬ್ಬಂದಿ ದೋಷಯುಕ್ತ ಇವಿಎಂಗಳನ್ನು ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಮೊದಲ ಎರಡು ತಾಸು ಮತದಾನ ನಿಧಾನ ಗತಿಯಲ್ಲಿ ಸಾಗಿತ್ತು. ಮತದಾರರು ಮತಗಟ್ಟೆಯತ್ತ ಮುಖ ಮಾಡಲಿಲ್ಲ. ಬೆಳಿಗ್ಗೆ 9 ಗಂಟೆವರೆಗೆ ಸರಾಸರಿ ಶೇ 6.41ರಷ್ಟು ಮತದಾನವಾಗಿತ್ತು.

ನಂತರ ಮತದಾರರು ಹುರುಪಿನಿಂದ ಮತಗಟ್ಟೆಗಳತ್ತ ಧಾವಿಸಿದರು. ಬಳಿಕ ಮತದಾನ ಚುರುಕುಗೊಂಡಿತು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಯಿತು. ಮತಗಟ್ಟೆ ಅಧಿಕಾರಿಗಳು ಮತದಾನದ ಕ್ಷಣ ಕ್ಷಣದ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ರವಾನಿಸಿದರು.

ಚುನಾವಣೆ ನಡೆದ ಕೋಲಾರ, ಮುಳಬಾಗಿಲು ಮತ್ತು ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆಗಳ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಮತದಾರರಿಗೆ ಮತದಾನ ಮಾಡಲು ಅವಕಾಶವಾಗುವಂತೆ ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳಿಗೆ ರಜೆ ನೀಡಲಾಗಿತ್ತು.

ಪೊಲೀಸ್‌ ಬಂದೋಬಸ್ತ್: ಮತಗಟ್ಟೆಗಳ ಸುತ್ತಮುತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ರಾಜಕೀಯ ಮುಖಂಡರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಮತದಾರರಿಗೆ ಮತ ಚಲಾವಣೆ ಬಗ್ಗೆ ತಿಳಿವಳಿಕೆ ನೀಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಗೃಹರಕ್ಷಕ ದಳ, ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಡಿಎಆರ್‌) ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು, ಮೂರೂ ನಗರಸಭೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು.

ಅಭ್ಯರ್ಥಿಗಳ ಬೆಂಬಲಿಗರು ಮತ್ತು ಪಕ್ಷಗಳ ಕಾರ್ಯಕರ್ತರು ಅಂಗವಿಕಲ ಹಾಗೂ ವಯೋವೃದ್ಧ ಮತದಾರರನ್ನು ಉಚಿತವಾಗಿ ಆಟೊಗಳಲ್ಲಿ ಮತಗಟ್ಟೆಗೆ ಕರೆತಂದು ಮತ ಹಾಕಿಸಿದರು. ಮತಗಟ್ಟೆಗಳಲ್ಲಿ ವ್ಹೀಲ್‌ ಚೇರ್‌ ಮತ್ತು ರ್‌್ಯಾಂಪ್‌ ಸೌಲಭ್ಯ ಕಲ್ಪಿಸಲಾಗಿತ್ತು. ವಯೋವೃದ್ಧ ಮತದಾರರು ಕುಟುಂಬ ಸದಸ್ಯರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.

ನಿಯಮಿತ ಪರಿಶೀಲನೆ: ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು, ಚುನಾವಣಾ ವೆಚ್ಚ ವೀಕ್ಷಕರು ಮತ್ತು ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಮತಗಟ್ಟೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಾರ್ಡ್‌ಗಳಲ್ಲಿ ಮತದಾರರ ಓಲೈಕೆ ಕಸರತ್ತು ಜೋರಾಗಿತ್ತು. ಕಾರ್ಯಕರ್ತರು ಮನೆ ಮನೆ ಅಲೆಯುತ್ತಾ ಮತದಾರರಿಗೆ ಹಣ ಹಾಗೂ ಉಡುಗೊರೆಯ ಆಮಿಷವೊಡ್ಡಿ ಮತಗಟ್ಟೆಗೆ ಕರೆತಂದು ಮತ ಹಾಕಿಸಿದರು. ಹಲವೆಡೆ ಚುನಾವಣಾ ಸಿಬ್ಬಂದಿಯ ಹಾಗೂ ಪೊಲೀಸರ ಕಣ್ತಪ್ಪಿಸಿ ಹಣ, ಸೀರೆ, ಬೆಳ್ಳಿ ದೀಪ, ಕೈಗಡಿಯಾರ, ಕುಕ್ಕರ್‌, ಮಿಕ್ಸಿ, ಚಿನ್ನದ ಮೂಗುತಿ ಹಂಚಿದರು. ಬಿಸಿಲ ಝಳ ಹೆಚ್ಚಿದ್ದರಿಂದ ಮತಗಟ್ಟೆಗಳಿಂದ ಸಾಕಷ್ಟು ದೂರದಲ್ಲಿ ಮತದಾರರಿಗೆ ನೀರು, ಮಜ್ಜಿಗೆ, ಪಾನಕ ವಿತರಿಸಿದರು.

ಸಮಯ ಕಳೆದಂತೆ ಮತದಾನ ಪ್ರಮಾಣ ಹೆಚ್ಚುತ್ತಾ ಹೋಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ಮತಗಟ್ಟೆಗಳ ಬಳಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮತದಾನ ಅಂತ್ಯಗೊಳ್ಳಲು ಒಂದು ತಾಸು ಬಾಕಿ ಇರುವಾಗ ಮತಗಟ್ಟೆಗಳ ಮುಂದೆ ಮತದಾರರ ದೊಡ್ಡ ಸಾಲೇ ಕಂಡುಬಂತು. ಮತದಾರರು ಕೊನೆಯ ಕ್ಷಣದವರೆಗೂ ಸರದಿ ಸಾಲಿನಲ್ಲಿ ನಿಂತು ಹುರುಪಿನಿಂದ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT