ಗುರುವಾರ , ಜುಲೈ 29, 2021
20 °C
ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ

ಸ್ವಚ್ಛ ಗ್ರಾಮಕ್ಕೆ ಜಿಲ್ಲಾಡಳಿತ ಸಂಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸ್ವಚ್ಛ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವ ಜಿಲ್ಲಾಡಳಿತವು ಗ್ರಾಮೀಣ ಭಾಗದಲ್ಲಿ ಘನ ತ್ಯಾಜ್ಯ ಘಟಕಗಳ ಸ್ಥಾಪನೆಗೆ ಜಮೀನು ಮಂಜೂರು ಮಾಡಿದ್ದು, ಘಟಕಗಳ ನಿರ್ಮಾಣ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶಕ್ಕೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಅಡಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ಜಿಲ್ಲೆಯಲ್ಲಿ 156 ಗ್ರಾ.ಪಂಗಳಿದ್ದು, ಈ ಪೈಕಿ 100 ಗ್ರಾ.ಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಉದ್ದೇಶಿಸಲಾಗಿದೆ. ಪ್ರತಿ ಘಟಕಕ್ಕೆ ಕನಿಷ್ಠ 5 ಎಕರೆ ಜಾಗ ಅಗತ್ಯವಿದ್ದು, ಜಿಲ್ಲಾಡಳಿತವು ಸದ್ಯ 100 ಘಟಕಗಳಿಗೆ ಜಮೀನು ಮಂಜೂರು ಮಾಡಿದೆ. ಉಳಿದ ಗ್ರಾ.ಪಂ ವ್ಯಾಪ್ತಿಯಲ್ಲಿ ಜಮೀನು ಮಂಜೂರು ಪ್ರಕ್ರಿಯೆ ಮುಂದುವರಿದಿದೆ.

ಜಮೀನು ಮಂಜೂರಾಗಿರುವ ಗ್ರಾ.ಪಂಗಳ ಪೈಕಿ 60 ಗ್ರಾ.ಪಂಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಸಂಪೂರ್ಣ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಅನುಮೋದನೆಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಕಳುಹಿಸಲಾಗಿದೆ. ಈ ಪೈಕಿ 31 ಘಟಕಗಳ ನಿರ್ಮಾಣಕ್ಕೆ ಇಲಾಖೆ ಆಯುಕ್ತರು ಅನುಮೋದನೆ ನೀಡಿದ್ದಾರೆ.

₹ 20 ಲಕ್ಷ ವೆಚ್ಚ: ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣ ವೆಚ್ಚ ಸುಮಾರು ₹ 20 ಲಕ್ಷ ಎಂದು ಅಂದಾಜಿಸಲಾಗಿದೆ. ಇದರ ಜತೆಗೆ ನರೇಗಾ ಅನುದಾನದಲ್ಲಿ ₹ 20 ಲಕ್ಷ ಬಳಸಿಕೊಳ್ಳಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪ್ರತಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಸ ಸಂಗ್ರಹಣೆಗೆ ಅಗತ್ಯವಿರುವ ವಾಹನ ಖರೀದಿಗೆ ₹ 6 ಲಕ್ಷ, ಮನೆಗಳಲ್ಲಿ ಕಸ ಸಂಗ್ರಹಣೆಗೆ ಅಗತ್ಯವಿರುವ ಕೆಂಪು ಮತ್ತು ಹಸಿರು ಬಣ್ಣದ ಬುಟ್ಟಿ ವಿತರಣೆಗೆ ₹ 1 ಲಕ್ಷ ನೀಡಲಾಗುತ್ತದೆ. ಗ್ರಾ.ಪಂ ವ್ಯಾಪ್ತಿಯ ಪ್ರತಿ ಮನೆಗೂ ಕಸದ ಬುಟ್ಟಿ ನೀಡಲಾಗುತ್ತದೆ. ಈಗಾಗಲೇ 3 ಕಡೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ಗ್ರಾಮೀಣ ಭಾಗದ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸವನ್ನು ಗ್ರಾ.ಪಂಗಳಲ್ಲಿನ ಸ್ವಚ್ಛತಾ ಸಿಬ್ಬಂದಿ 2 ದಿನಕ್ಕೊಮ್ಮೆ ಮನೆ ಬಾಗಿಲಲ್ಲೇ ಸಂಗ್ರಹಿಸುತ್ತಾರೆ. ಸಾಮಾನ್ಯವಾಗಿ ಗ್ರಾಮಗಳಲ್ಲಿ ಜನರು ಮನೆಯ ಹಸಿ ಕಸವನ್ನು ತಿಪ್ಪೆಗೆ ಸುರಿಯುತ್ತಾರೆ ಅಥವಾ ಜಾನುವಾರುಗಳಿಗೆ ನೀಡುತ್ತಾರೆ. ಇದರಿಂದ ಹಸಿ ಕಸ ಹೆಚ್ಚು ಸಂಗ್ರಹವಾಗುವುದಿಲ್ಲ. ಹೀಗಾಗಿ ಪಟ್ಟಣ ಭಾಗದ ಹೋಟೆಲ್ ಮತ್ತು ಕಲ್ಯಾಣ ಮಂಪಟಗಳಲ್ಲಿನ ಹಸಿ ಕಸ ಸಂಗ್ರಹಿಸಲಾಗುತ್ತದೆ ಎಂದು ಜಿ.ಪಂ ಅಧಿಕಾರಿಗಳು ಹೇಳಿದ್ದಾರೆ.

ಸೆಸ್ ಸಂಗ್ರಹ: ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭ ಮಾಡಿದ ಬಳಿಕ ಕಸದ ಸಂಗ್ರಹಣೆ ಮೇಲೆ ಗ್ರಾಮಸ್ಥರಿಗೆ ತೆರಿಗೆ (ಸೆಸ್‌) ವಿಧಿಸಲು ಜಿ.ಪಂ ನಿರ್ಧರಿಸಿದೆ. ಅದಕ್ಕೂ ಮುನ್ನ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದರ ಕುರಿತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಿ ತೆರಿಗೆ ಬಗ್ಗೆ ತಿಳಿವಳಿಕೆ ಮೂಡಿಸುತ್ತೇವೆ ಎಂದು ಜಿ.ಪಂ ಅಧಿಕಾರಿಗಳು ತಿಳಿಸಿದ್ದಾರೆ.

ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ಮಾರಾಟ ಮಾಡುವುದರಿಂದ ಬರುವ ಆದಾಯವು ಗ್ರಾ.ಪಂಗಳ ಬೊಕ್ಕಸ ಸೇರುತ್ತದೆ. ಈ ಆದಾಯವನ್ನು ಘಟಕ ನಿರ್ವಹಣೆಗೆ ಹಾಗೂ ಸಿಬ್ಬಂದಿ ವೇತನಕ್ಕೆ ಬಳಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು