ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ಜಿಲ್ಲೆ ಮಾದಕ ವ್ಯಸನಿಗಳ ತವರು

ಸಮನ್ವಯ ಸಮಿತಿ ಸಭೆಯಲ್ಲಿ ಜಿ.ಪಂ ಸಿಇಒ ಜಗದೀಶ್ ಬೇಸರ
Last Updated 7 ಆಗಸ್ಟ್ 2019, 14:32 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಮಾದಕ ವಸ್ತು ಬಳಕೆದಾರರ ಸಂಖ್ಯೆ ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಜಿಲ್ಲೆಯು ಮಾದಕ ವ್ಯಸನಿಗಳ ತವರು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ನಡೆದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಮತ್ತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಮಾದಕ ವ್ಯಸನಿಗಳಿಗೆ ಯಾರು ಮಾದಕ ವಸ್ತು ಸರಬರಾಜು ಮಾಡುತ್ತಾರೆ ಮತ್ತು ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ?’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಗದೀಶ್, ‘ಕೆಲ ಲೈಂಗಿಕ ಅಲ್ಪಸಂಖ್ಯಾತರು ಮಾದಕ ವಸ್ತು ಉಪಯೋಗಿಸುತ್ತಾರೆ. ಅವರಿಂದ ಮತ್ತೊಬ್ಬರು ವ್ಯಸನ ಆರಂಭಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 3,610 ಮಂದಿ ಎಚ್‍ಐವಿ ಸೋಂಕಿತರಿದ್ದು, ಈ ಪೈಕಿ 1,500 ಮಂದಿ ವಿಳಾಸದಲ್ಲಿ ಇಲ್ಲ. ಹೀಗಾಗಿ ಅವರಿಗೆ ಚಿಕಿತ್ಸೆ ಕೊಡಿಸಲು ಸಮಸ್ಯೆಯಾಗಿದೆ. ಸಿಬ್ಬಂದಿಯು ವಿವಿಧ ವಿಧಾನಗಳ ಮೂಲಕ ಅವರನ್ನು ಪತ್ತೆಹಚ್ಚಲು ಶ್ರಮಿಸುತ್ತಿದ್ದಾರೆ. 73 ಮಂದಿ ಏಡ್ಸ್ ಪೀಡಿತರಿದ್ದು, ಅವರ ಪುನರ್ವಸತಿಗೆ ರಾಜೀವ್‌ಗಾಂಧಿ ವಸತಿ ಯೋಜನೆಯಲ್ಲಿ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 473 ಮಂದಿ ಮಾದಕ ವ್ಯಸನಿಗಳಿದ್ದು, ಇವರನ್ನು ವ್ಯಸನ ಮುಕ್ತಗೊಳಿಸಲು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಕ್ಕೆ ಬಂದವರಲ್ಲಿ ಕೆಲವರು ಮಾದಕ ವ್ಯಸನ ಬಿಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಾಗೃತಿ ಮೂಡಿಸಿ: ‘1,500 ಮಂದಿ ಎಚ್‌ಐವಿ ಸೋಂಕಿತರು ಚಿಕಿತ್ಸೆಗೆ ಬರುತ್ತಿಲ್ಲ ಎಂದರೆ ಏನು ಅರ್ಥ? ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜನ ಜಾಗೃತಿ ಮೂಡಿಸಿದರೆ ಎಚ್‍ಐವಿ ಸೋಂಕು ತಡೆಗಟ್ಟಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಈ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು’ ಎಂದು ಸಿಇಒ ಎಚ್ಚರಿಕೆ ನೀಡಿದರು.

‘ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ. ಇಲಾಖೆ ಗುರಿ ಸಾಧನೆ ಅವಲೋಕಿಸಿದರೆ ತುಂಬಾ ಹಿಂದುಳಿದಿದ್ದೀರಿ ಎಂಬುದು ಗೊತ್ತಾಗುತ್ತದೆ. ರಾಜ್ಯ ಮಟ್ಟದ ಅಧಿಕಾರಿಗಳ ವಿಡಿಯೋ ಸಂವಾದದಲ್ಲಿ ನಾವು ತಲೆ ತಗ್ಗಿಸುವಂತಾಗಿದೆ. ಇದನ್ನು ಸಹಿಸುವುದಿಲ್ಲ. ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ಗುರಿ ಸಾಧನೆ ಕಷ್ಟವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ತಪಾಸಣೆ: ‘ಜಿಲ್ಲೆಯಲ್ಲಿ ಶುಚಿ ಯೋಜನೆಯಡಿ ಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಅಂಗನವಾಡಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಆರೋಗ್ಯ ತಪಾಸಾಣೆ ನಡೆಸಲಾಗುತ್ತಿದೆ. ಈವರೆಗೆ 83,909 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್ ಮಾಹಿತಿ ನೀಡಿದರು.

‘ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ತಾಲ್ಲೂಕು ಮಟ್ಟದ ವೈದ್ಯರ ತಂಡ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದೆ. ಕಾಯಿಲೆ ಕಂಡುಬಂದರೆ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆ ಕೊಡುತ್ತಾರೆ. ಈವರೆಗೆ 7 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಮಕ್ಕಳಿಗೆ ಪ್ರತಿವಾರ ಕಬ್ಬಿಣಾಂಶದ ಮಾತ್ರೆ ವಿತರಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಶುಚಿ ಯೋಜನೆಯ ತಾಲ್ಲೂಕುವಾರು ಅಂಕಿ ಅಂಶ ಗಮನಿಸಿದರೆ ಶೇ 50ರಷ್ಟೂ ಸಾಧನೆಯಾಗಿಲ್ಲ. ವೈದ್ಯರ ತಂಡ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎಂದು ಸಿಇಒ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪಾಲಿ ಹಾಜರಿದ್ದರು.

ಅಂಕಿ ಅಂಶ.....
* 3,610 ಮಂದಿ ಎಚ್‍ಐವಿ ಸೋಂಕಿತರು
* 73 ಮಂದಿ ಏಡ್ಸ್ ಪೀಡಿತರು
* 473 ಮಂದಿ ಮಾದಕ ವ್ಯಸನಿಗಳು
* 83,909 ಮಕ್ಕಳ ಆರೋಗ್ಯ ತಪಾಸಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT