ಸೋಮವಾರ, ಜನವರಿ 20, 2020
28 °C
ಸಮ್ಮೇಳನಕ್ಕೆ ಸಹಕರಿಸಿ: ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮನವಿ

ಕೋಲಾರ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜ.16ಮತ್ತು 17ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಸಹ ಪ್ರಾಧ್ಯಾಪಕ ಹಾಗೂ ಮಕ್ಕಳ ಸಾಹಿತಿ ಸಿ.ಎಂ.ಗೋವಿಂದರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಲಾಗುತ್ತದೆ’ ಎಂದರು.

‘ಸಮ್ಮೇಳನದ ಮಹಾದ್ವಾರಕ್ಕೆ ನ್ಯಾಯಮೂರ್ತಿ ವೆಂಕಟಾಚಲ ಮಹಾದ್ವಾರವೆಂದು ಹಾಗೂ ವೇದಿಕೆಗೆ ಜಿ.ಪಿ.ರಾಜರತ್ನಂ ಅವರ ಹೆಸರಿಡಲಾಗಿದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಪ್ರಸ್ತಕ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಇರುತ್ತದೆ’ ಎಂದು ಹೇಳಿದರು.

‘ಸಮ್ಮೇಳನದ ಮೊದಲ ದಿನ ಜಿಲ್ಲಾಧಿಕಾರಿ ಜೆ.ಮಂಜುನಾಥ್ ರಾಷ್ಟ್ರಧ್ವಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಪ್ರಹ್ಲಾದರಾವ್ ನಾಡ ಧ್ವಜಾರೋಹಣ ನೆರವೇರಿಸುತ್ತಾರೆ. ನಾನು ಪರಿಷತ್ತಿನ ಧ್ವಜಾರೋಹಣ ಮಾಡುತ್ತೇನೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಚಾಲನೆ ನೀಡುತ್ತಾರೆ’ ಎಂದು ವಿವರಿಸಿದರು.

‘ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಸಮ್ಮೇಳನ ಉದ್ಘಾಟಿಸುತ್ತಾರೆ. ಶಾಸಕ ಕೆ.ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.

‘ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷರ ಭಾಷಣ, ಕೃಷಿ ಮತ್ತು ಪರಿಸರದ ಪ್ರಶ್ನೆಗಳು ಕುರಿತು ವಿಚಾರಗೋಷ್ಠಿ, ವರ್ತಮಾನಕ್ಕೆ ಪಂಪ: ಒಂದು ಮರು ಓದು ಕುರಿತು ವಿಶೇಷ ಉಪನ್ಯಾಸ, ಸನ್ಮಾನ ಕಾರ್ಯಕ್ರಮ, ಮಲ್ಲಿಗೆ ನಾಟಕ ಪ್ರದರ್ಶನ ನಡೆಯುತ್ತದೆ. 2ನೇ ದಿನ ಸಮ್ಮೇಳಾಧ್ಯಕ್ಷರ ಬದುಕು ಬರಹ, ಗಡಿ ಮೀರಿದ ಬದುಕು ಕುರಿತು ವಿಚಾರಗೋಷ್ಠಿ, ಕವಿ ಗೋಷ್ಠಿ, ಸನ್ಮಾನ ಸಮಾರಂಭ, ಸಮಾರೋಪ ಸಮಾರಂಭ, ಕರ್ನಾಟಕ ದರ್ಶನ ಗೀತಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯುತ್ತದೆ’ ಎಂದರು.

10,500 ಸದಸ್ಯರು: ‘ಜಿಲ್ಲೆಯಲ್ಲಿ 10,500ಕ್ಕೂ ಹೆಚ್ಚು ಮಂದಿ ಪರಿಷತ್ತಿನ ಸದಸ್ಯರಾಗಿದ್ದಾರೆ. ಸುಮಾರು 2,200 ಆಹ್ವಾನ ಪತ್ರಿಕೆ ಮುದ್ರಿಸಿ ವಿತರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಮ್ಮೇಳನದ ಮಾಹಿತಿ ನೀಡಲಾಗುತ್ತಿದೆ. ಪ್ರತಿನಿಧಿ ಶುಲ್ಕ ₹ 100 ನಿಗದಿಪಡಿಸಲಾಗಿದ್ದು, ಈಗಾಗಲೇ 200ಕ್ಕೂ ಅಧಿಕ ಮಂದಿ ಸಮ್ಮೇಳನಕ್ಕೆ ಹೆಸರು ನೋಂದಾಯಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರು, ಪಿಯುಸಿ ಕಾಲೇಜು ಉಪನ್ಯಾಸಕರಿಗೆ ಸಮ್ಮೇಳನಕ್ಕೆ ಬರಲು ಅನುಕೂಲವಾಗುವಂತೆ ಒಒಡಿ ಸೌಲಭ್ಯ ಕಲ್ಪಿಸಲಾಗಿದೆ. ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು. ಸರ್ಕಾರದ ₹ 5 ಲಕ್ಷ ಅನುದಾನದಲ್ಲಿ ಸರಕು ಮತ್ತು ಸೇವಾ ತೆರಿಗೆ ಕಳೆದು ಸಮ್ಮೇಳನಕ್ಕೆ ₹ 4.30 ಲಕ್ಷ ಸಿಗುತ್ತದೆ. ಊಟಕ್ಕೆ ಹೆಚ್ಚು ವೆಚ್ಚವಾಗಲಿದ್ದು, ದಾನಿಗಳು ಸಮ್ಮೇಳನಕ್ಕೆ ಹಣಕಾಸು ನೆರವು ನೀಡಬೇಕು’ ಎಂದು ಕೋರಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿಗಳಾದ ಆರ್.ಅಶ್ವತ್ಥ್, ಆರ್.ಎಂ.ವೆಂಕಟಸ್ವಾಮಿ, ಕೋಶಾಧ್ಯಕ್ಷ ರತ್ನಪ್ಪ ಮೇಲಾಗಣಿ, ಪ್ರಧಾನ ಸಂಚಾಲಕ ಎಂ.ಪಿ.ನಾರಾಯಣಸ್ವಾಮಿ, ಕೋಲಾರ ನಗರ ಘಟಕದ ಅಧ್ಯಕ್ಷ ಬಿ.ಶಿವಕುಮಾರ್, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕೆ.ಎನ್.ಪರಮೇಶ್ವರನ್, ಹುತ್ತೂರು ಹೋಬಳಿ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)