ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕಸಾಪ: ಹಿಟ್ಲರ್‌ ಧೋರಣೆಯ ಅಧ್ಯಕ್ಷ

ನಾಗಾನಂದ ಕೆಂಪರಾಜ್‌ ವಿರುದ್ಧ ಅಭ್ಯರ್ಥಿ ನಾಗರಾಜ್‌ ವಾಗ್ದಾಳಿ
Last Updated 7 ಏಪ್ರಿಲ್ 2021, 15:11 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು 5 ವರ್ಷಗಳ ಕಾಲ ಸರ್ವಾಧಿಕಾರಿ ಹಿಟ್ಲರ್‌ ಧೋರಣೆ ಅನುಸರಿಸಿ ಸಾಹಿತ್ಯ ವರ್ಗದವರೂ ಸಹ ಪರಿಷತ್ತಿನೊಳಗೆ ಬರದಂತೆ ದಿಗ್ಭಂದನ ಹೇರುತ್ತಾ ಬಂದಿದ್ದಾರೆ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜೆ.ಜಿ.ನಾಗರಾಜ್‌ ಕಿಡಿಕಾರಿದರು.

ಇಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಮಾತನಾಡಿ, ‘ಹಿಂದಿನ ಅಧ್ಯಕ್ಷರ ಸುಳ್ಳು ಹೇಳಿಕೆಗಳು ಸಾಹಿತ್ಯದ ನಡೆಯಾಗದಿರಲಿ. ಅವರು ಇನ್ನಾದರೂ ತಮ್ಮ ಉಪನ್ಯಾಸಕ ವೃತ್ತಿಯಲ್ಲಿ ಮುಂದುವರಿಯುವ ಮೂಲಕ ಸಾಹಿತ್ಯ ಕ್ಷೇತ್ರದಿಂದ ದೂರವಾಗುವುದು ಒಳಿತು’ ಎಂದು ಪರಿಷತ್ತಿನ ಹಾಲಿ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಲಕ್ಷಾಂತರ ಜನರಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಲಾರ ಜಿಲ್ಲೆಯಲ್ಲಿ 10 ಸಾವಿರ ಪರಿಷತ್‌ ಸದಸ್ಯರ ಜತೆಗೆ ಲಕ್ಷಾಂತರ ಮಂದಿ ಸಾಹಿತ್ಯದ ಮನಸ್ಸುಗಳಿವೆ. ಈ ಸಾಹಿತ್ಯದ ಮನಸ್ಸುಗಳು ಪರಿಷತ್ತಿನಿಂದ ದೂರವಾಗಿದ್ದು, ಅವರನ್ನು ಮತ್ತೆ ಪರಿಷತ್ತಿನೊಳಗೆ ತರಬೇಕು. ಪರಿಷತ್ತಿನ ಗೌರವ ಕಾಪಾಡಲು ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ತಿಳಿಸಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಅವರ ಆಶಯಗಳ ಮೂಲರೂಪವನ್ನು ಕಾರ್ಯರೂಪಕ್ಕೆ ತರಬೇಕಿದೆ. ಯಾವುದೇ ಕಳಂಕ ತರದೆ ಪರಿಷತ್ತು ಹೇಗಿದೆಯೋ ಹಾಗೆಯೇ ಅದರ ನಡೆ ರೂಪಿಸಿಲು ನಾನು ಬಂದಿರುವೆ’ ಎಂದು ಹೇಳಿದರು.

‘ಹಿಂದಿನ 5 ವರ್ಷಗಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಕಳಂಕ ನಡೆ ಮತ್ತು ಭ್ರಷ್ಟ ನಡೆ. ಇತಿಹಾಸ ಉಪನ್ಯಾಸಕರಾಗಿರುವ ಅಧ್ಯಕ್ಷರು ಹಿಟ್ಲರ್ ರೀತಿ ನಡೆದುಕೊಂಡಿದ್ದಾರೆ. ಕನ್ನಡದ ಜ್ಞಾನವನ್ನು ಕೇಂದ್ರೀಕರಣ ಮಾಡುವ ಮೂಲಕ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ 11 ಸಾಹಿತ್ಯ ಸಮ್ಮೇಳನ ನಡೆಸಿದ ಇಂತಹ ಅಧ್ಯಕ್ಷರನ್ನು ಹಿಂದೆಂದೂ ನೋಡಿಲ್ಲ’ ಎಂದು ವ್ಯಂಗ್ಯವಾಡಿದರು.

ವಿಕೇಂದ್ರೀಕರಣ: ‘ಸಾಹಿತ್ಯ ಸಮ್ಮೇಳನಗಳನ್ನು ವಿಕೇಂದ್ರೀಕರಣಗೊಳಿಸುತ್ತೇವೆ. ಪರಿಷತ್‌ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆ ತಲುಪಿಸುತ್ತೇವೆ. ಪರಿಷತ್ತಿನಿಂದ ದೂರವಾಗಿರುವ ಎಲ್ಲರನ್ನೂ ಹತ್ತಿರ ಕರೆಸಿಕೊಳ್ಳುವ ಕೆಲಸ ಮಾಡುತ್ತೇವೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಿಕೊಂಡಿದ್ದೇವೆ. ಎಲ್ಲಾ ಕನ್ನಡಪರ ಸಂಘಟನೆಗಳು ಮತ್ತು ಯುವಶಕ್ತಿ ನಮ್ಮ ಜತೆಗಿದ್ದು, ಗೆಲುವಿನ ವಿಶ್ವಾಸವಿದೆ’ ಎಂದರು.

ಕನ್ನಡ ಸಿರಿ ಸಾಹಿತ್ಯ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಕೆ.ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಸುಬ್ಬರಾಮಯ್ಯ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ನಾರಾಯಣಪ್ಪ, ಸಮುದಾಯ ಸಂಘಟನೆ ರಾಜ್ಯ ಅಧ್ಯಕ್ಷ ಅಚ್ಯುತ, ವಿಶ್ವಮಾನವ ವೇದಿಕೆ ಸಂಸ್ಥಾಪಕ ನಾಗಾರಾಜ್, ಸಾಹಿತಿ ವೆಂಕಟಾಪು ಸತ್ಯಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT