ಭಾನುವಾರ, ಅಕ್ಟೋಬರ್ 20, 2019
23 °C
ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ: ಸಭೆಯಲ್ಲಿ ಡಿಡಿಪಿಐ ರತ್ನಯ್ಯ ಸೂಚನೆ

23ಕ್ಕೆ ಜಿಲ್ಲಾ ಪ್ರತಿಭಾ ಕಾರಂಜಿ ಸ್ಪರ್ಧೆ

Published:
Updated:
Prajavani

ಕೋಲಾರ: ‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಇಲಾಖೆಯು ಅ.23ರಂದು ನಡೆಸುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಕಲೋತ್ಸವದ ಯಶಸ್ಸಿಗೆ ಸಹಕಾರ ನೀಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸೂಚಿಸಿದರು.

ಪ್ರತಿಭಾ ಕಾರಂಜಿ ಸ್ಪರ್ಧೆ ಸಂಬಂಧ ಇಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ವಿವಿಧ ಕಾರ್ಯಗಳಿಗೆ ನೇಮಕಗೊಂಡಿರುವ ಸಮಿತಿಗಳ ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ಅ.24ರಂದು ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಆ ದಿನ ಸಮುದಾಯದತ್ತ ಶಾಲಾ ಕಾರ್ಯಕ್ರಮ ಇರುವುದಿಂದ ಅ.23ರಂದು ನಗರದ ಅಂಜುಮಾನ್ ಪ್ರೌಢ ಶಾಲೆ ಆವರಣದಲ್ಲಿ ಸ್ಪರ್ಧೆ ನಡೆಸಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

‘ಶಿಕ್ಷಕರು ಸ್ಪರ್ಧೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ಈಗಾಗಲೇ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ ಮಕ್ಕಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಸಿದ್ಧಗೊಳಿಸಬೇಕು. ಪ್ರತಿ ಶಾಲೆಗೂ ಸ್ಪರ್ಧೆಯ ಮಾಹಿತಿ ತಲುಪಿಸಬೇಕು. ಉಸ್ತುವಾರಿ ಶಿಕ್ಷಕರು ಮಕ್ಕಳನ್ನು ಸ್ಪರ್ಧೆಗೆ ಕರೆತರಬೇಕು. ಜಿಲ್ಲೆಯ ಆರು ತಾಲ್ಲೂಕುಗಳಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

‘ಸ್ವಾಗತ ಸಮಿತಿಗೆ ನೇಮಕಗೊಂಡಿರುವವರು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಿ. ಆಯಾ ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಆಹ್ವಾನ ಪತ್ರಿಕೆ ನೀಡಿ. ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಶಿಕ್ಷಕರ ಸಂಘಗಳ ಪ್ರತಿನಿಧಿಗಳಿಗೆ ಸಕಾಲಕ್ಕೆ ಆಹ್ವಾನ ಪತ್ರಿಕೆ ತಲುಪಿಸಬೇಕು’ ಎಂದರು.

150 ತೀರ್ಪುಗಾರರು: ‘ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರತಿ ತಾಲ್ಲೂಕಿನಿಂದ ತಲಾ 40 ಮಂದಿಯ ಹೆಸರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲ್ಲೂಕು ನೋಡಲ್ ಅಧಿಕಾರಿಗಳು ದೃಢೀಕರಿಸಿ ನೀಡಬೇಕು. ಅವರಲ್ಲಿ ಅಂತಿಮವಾಗಿ ತಾಲ್ಲೂಕಿಗೆ ತಲಾ 25ರಂತೆ 150 ಮಂದಿಯನ್ನು ತೀರ್ಪುಗಾರರಾಗಿ ಆಯ್ಕೆ ಮಾಡಲಾಗುತ್ತದೆ. ಕೋಲಾರ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ತೀರ್ಪುಗಾರರನ್ನು ಆಯ್ಕೆ ಮಾಡಿ’ ಎಂದು ಹೇಳಿದರು.

‘ಸ್ಪರ್ಧೆಗೆ ಬರುವ ಮಕ್ಕಳಿಗೆ ನೀಡುವ ಆಹಾರ ಶುಚಿ, ರುಚಿಯಾಗಿರಬೇಕು. ಅಂಜುಮಾನ್ ಶಾಲೆ ಆವರಣದಲ್ಲಿ ಮಕ್ಕಳಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ಗೊಂದಲವಾಗದಂತೆ ಸ್ಪರ್ಧೆ ನಡೆಸಬೇಕು’ ಎಂದು ತಾಕೀತು ಮಾಡಿದರು.

ಶಿಕ್ಷಣ ಸಂಯೋಜಕ ಶ್ರೀನಿವಾಸಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್.ನಾಗರಾಜಗೌಡ, ಸೋಮೇಶ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್‌, ಪ್ರತಿಭಾ ಕಾರಂಜಿ ಸ್ಪರ್ಧೆಯ ನೋಡಲ್ ಅಧಿಕಾರಿಗಳಾದ ಶಶಿವಧನ, ಗಾಯಿತ್ರಿ, ಕೃಷ್ಣಪ್ಪ, ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ ಹಾಜರಿದ್ದರು.

Post Comments (+)