ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಸಾಮರಸ್ಯಕ್ಕೆ ಜಿಲ್ಲೆ ಮಾದರಿ

ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ಎಂ.ಕೆ.ವೆಂಕಟಾಚಲಪತಿ ಹರ್ಷ
Last Updated 1 ಅಕ್ಟೋಬರ್ 2019, 14:08 IST
ಅಕ್ಷರ ಗಾತ್ರ

ಕೋಲಾರ: ‘ಭಾಷಾ ಸಾಮರಸ್ಯಕ್ಕೆ ಜಿಲ್ಲೆ ಮಾದರಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನ ಉತ್ಸವದ ರೀತಿ ನಡೆಸುವ ಮೂಲಕ ಕಲೆಗೆ ಆದ್ಯತೆ ನೀಡುವ ಕೆಲಸ ಆಗುತ್ತಿದೆ’ ಎಂದು ಸಮ್ಮೇಳನಾಧ್ಯಕ್ಷ ಎಂ.ಕೆ.ವೆಂಕಟಾಚಲಪತಿ ಹರ್ಷ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲ್ಲೂಕಿನ ಮದನಹಳ್ಳಿ ಕ್ರಾಸ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸುಗಟೂರು ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ‘ಗಡಿನಾಡು ಜಿಲ್ಲೆಯಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಮಾತನಾಡುವವರು ಇದ್ದಾರೆ. ಆದರೆ ನಮ್ಮದೇ ಭಾಷೆ ಶ್ರೇಷ್ಠ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕನ್ನಡವನ್ನು ಪಾಲಿಸುವುದು ಪ್ರತಿಯೊಬ್ಬರ ಧರ್ಮ. ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹದಿಂದಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿದೆ. ಶಾಸ್ತ್ರೀಯ ಸಂಗೀತ ಕಲಿಯುವುದರಿಂದ ಭಾರತೀಯ ಸಂಸ್ಕೃತಿ, ಸಂಸ್ಕಾರ ಮಕ್ಕಳಲ್ಲಿ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಾನು ಶಿಕ್ಷಕನಾಗಿದ್ದಾಗ ಡಿವಿಜಿ ಅವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಅವರ ಸರಳತೆ, ಆದರ್ಶ ಜೀವನ, ಬರಹಗಳು ನನ್ನ ಜೀವನದಲ್ಲೂ ಸಾಕಷ್ಟು ಪ್ರಭಾವ ಬೀರಿದೆ. ಚಿಂತಾಮಣಿಯ ಚಿಂತಲಪಲ್ಲಿ ಗ್ರಾಮದಲ್ಲಿ ಅನೇಕ ಸಂಗೀತ ವಿದ್ವಾಂಸರಿದ್ದು, ಆ ಗ್ರಾಮಕ್ಕೆ ಸಂಗೀತ ಕ್ಷೇತ್ರದಲ್ಲಿ 800 ವರ್ಷಗಳ ಇತಿಹಾಸವಿದೆ’ ಎಂದು ವಿವರಿಸಿದರು.

‘ಮಕ್ಕಳಲ್ಲಿ ಜ್ಞಾನ, ಸಂಸ್ಕೃತಿ ಬೆಳೆಯಲು ಸಂಗೀತ ಸಹಕಾರಿಯಾಗಿದೆ. ನಾಡು, ದೇಶ ನಾದಮಯ ಆಗಬೇಕು. ಆದರೆ ಸಂಗೀತ, ಜನಪದ ಕ್ಷೇತ್ರಕ್ಕೆ ಸರ್ಕಾರದಿಂದ ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ನಂಜುಂಡಪ್ಪ ಮಾತನಾಡಿ, ‘ಕನ್ನಡ 2 ಸಾವಿರ ವರ್ಷಗಳ ಇತಿಹಾಸ ಇದೆ. ಅತ್ಯಂತ ಪುರಾತನ, ಶ್ರೀಮಂತ ಭಾಷೆ. ರಾಜ್ಯದ ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಅಗಬೇಕು. ಮಕ್ಕಳಿಗೆ ಕನ್ನಡದ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ‘ಕನ್ನಡ ಭಾಷೆ, ನಾಡು ವಿಚಾರದಲ್ಲಿ ಯಾವುದೇ ಜಾತಿ, ಮತದ ಬೇಧ ಇರಬಾರದು. ಕನ್ನಡ ಕಟ್ಟಲು ರಾಜಕೀಯ ಬೇಡ’ ಎಂದರು.

‘ಭಾಷೆಯನ್ನು ಬೆಳೆಸಲು, ಕನ್ನಡಕ್ಕೆ ಶಕ್ತಿ ನೀಡುವ ರಾಜಕೀಯ ಮಾಡಬೇಕು. ಕನ್ನಡ ನಮ್ಮ ಮಾತೃ ಭಾಷೆ, ಹೃದಯದ ಭಾಷೆ ಆಗಬೇಕು. ಪ್ರತಿಯೊಬ್ಬ ಕನ್ನಡಿಗನೂ ಹೃದಯ ವೈಶಾಲ್ಯತೆಯಿಂದ ಕನ್ನಡ ಬೆಳೆಸುವ ಕೆಲಸ ಮಾಡಬೇಕು. ಕವಿ ಜವರೇಗೌಡ ಹೇಳುವಂತೆ ಕನ್ನಡವೇ ಜಾತಿ, ಮತಿ ಆಗಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮನ್ನೂ ಮುನ್ನ ಶಾಲಾ ಆವರಣದಲ್ಲಿ ತಹಸೀಲ್ದಾರ್ ನಾಗವೇಣಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಪರಿಷತ್ತಿನ ನಾಗಾನಂದ ಕೆಂಪರಾಜ್ ನಾಡಧ್ವಜ, ಹೋಬಳಿ ಅಧ್ಯಕ್ಷ ಚಿ.ನಾ.ನಾಗೇಶ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಪರಿಷತ್ತಿನ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಜಿ.ಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ರೋಟರಿ ಅಧ್ಯಕ್ಷ ಎಸ್.ವಿಶ್ವನಾಥ್, ಸಹಕಾರಿ ಯೂನಿಯನ್ ನಿರ್ದೇಶಕ ಎ.ಸಿ.ಭಾಸ್ಕರ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೆಂಕಟರವಣಪ್ಪ, ಮದನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಗೋಪಾಲರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT