ಮದುವಣಗಿತ್ತಿಯಂತೆ ಸಿಂಗಾರಗೊಂಡ ಜಿಲ್ಲಾ ಕ್ರೀಡಾಂಗಣ

7
ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ: ಸಕಲ ಸಿದ್ಧತೆ

ಮದುವಣಗಿತ್ತಿಯಂತೆ ಸಿಂಗಾರಗೊಂಡ ಜಿಲ್ಲಾ ಕ್ರೀಡಾಂಗಣ

Published:
Updated:
Deccan Herald

ಕೋಲಾರ: ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಕ್ರೀಡಾಂಗಣದಲ್ಲಿ ಬುಧವಾರ (ಆ.15) ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿದ್ದು, ಪೊಲೀಸರು ನಗರದೆಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಕ್ರೀಡಾಂಗಣದ ಒಂದು ಬದಿಯಲ್ಲಿ ಧ್ವಜಾರೋಹಣಕ್ಕೆ ಸಿಮೆಂಟ್‌ನ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ.

ವೇದಿಕೆಗೆ ಹೊಂದಿಕೊಂಡಂತೆ ಅಕ್ಕಪಕ್ಕ ಪೆಂಡಾಲ್ ಹಾಕಲಾಗಿದೆ. ಗಣ್ಯರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದ ಪ್ರವೇಶ ಭಾಗದಲ್ಲಿ ಎರಡು ಕಡೆಯೂ ಹುಲ್ಲು ಹಾಸು ನಿರ್ಮಾಣ ಮಾಡಲಾಗಿದೆ. ಅಲ್ಲದೇ, ಅಲಂಕಾರಿಕ ಗಿಡಗಳನ್ನು ಹಾಕಲಾಗಿದೆ.

ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ, ಸೇವಾದಳ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ ಸದಸ್ಯರು ಹಾಗೂ ಶಾಲಾ ಮಕ್ಕಳು ಕ್ರೀಡಾಂಗಣದಲ್ಲಿ ಪಥಸಂಚಲನ ನಡೆಸಲಿದ್ದು, ಇದಕ್ಕೆ ಟ್ರ್ಯಾಕ್‌ ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾಲೀಮು ನಡೆಸಿದ್ದಾರೆ.

ಮೈದಾನದಲ್ಲಿ ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್‌, ಅಗ್ನಿನಂದಕ ವಾಹನ, ವೈದ್ಯಕೀಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಜತೆಗೆ ಗೃಹರಕ್ಷಕ ದಳ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಶಾಲಾ ಮಕ್ಕಳನ್ನು ಸಮಾರಂಭದ ಸ್ಥಳಕ್ಕೆ ಕರೆತರಲು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಹದ್ದಿನ ಕಣ್ಣು: ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ ಪ್ರದೇಶ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಠಾಣೆಗಳಿಂದ ಹಾಗೂ ಗುಪ್ತಚರ ದಳ ಸಿಬ್ಬಂದಿಯಿಂದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಕಲೆ ಹಾಕಿ ಹೆಚ್ಚಿನ ಬಂದೋಬಸ್ತ್ ಮಾಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ನಗರದ ವಸತಿಗೃಹಗಳು ಹಾಗೂ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ವಸತಿಗೃಹಗಳು ಮತ್ತು ಹೋಟೆಲ್‌ಗಳಿಗೆ ಬಂದು ಹೋಗುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಿದ್ದಾರೆ. ನಗರದ ಪ್ರವೇಶ ಭಾಗಗಳಲ್ಲಿ ನಾಕಬಂದಿ ಹಾಕಿ, ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ. ಪ್ರಮುಖ ವೃತ್ತ ಹಾಗೂ ಜಂಕ್ಷನ್‌ಗಳಲ್ಲಿನ ಸಿ.ಸಿ ಕ್ಯಾಮೆರಾಗಳ ಮೂಲಕ ನಗರದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಪಥಸಂಚಲನದ ತಾಲೀಮು: ಬುಧವಾರ ಸಂಜೆ 5ಕ್ಕೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಕ್ಕಳು ಈಗಾಗಲೇ ತಾಲೀಮು ನಡೆಸಿದ್ದು, ಪ್ರತಿಭೆಯ ಅನಾವರಣಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಪಥಸಂಚಲನದ ತಾಲೀಮು ನಡೆಸಿದ್ದಾರೆ.

ನಗರಸಭೆಯು ಪ್ಲಾಸ್ಟಿಕ್‌ ಧ್ವಜಗಳನ್ನು ಮಾರಾಟ ಮಾಡುವುದನ್ನು ಹಾಗೂ ಹಾರಿಸುವುದನ್ನು ನಿರ್ಬಂಧಿಸಿದೆ. ಆದರೂ ನಗರದ ಹಲವೆಡೆ ಅಧಿಕಾರಿಗಳ ಕಣ್ತಪ್ಪಿಸಿ ಪ್ಲಾಸ್ಟಿಕ್‌ ಧ್ವಜ ಮಾರಾಟ ಮಾಡುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು. ಮಕ್ಕಳು ಪೋಷಕರೊಂದಿಗೆ ಅಂಗಡಿಗಳಿಗೆ ಬಂದು ತ್ರಿವರ್ಣ ಧ್ವಜ, ಕೈ ಬ್ಯಾಂಡ್‌, ಬಿಳಿ ಟೇಪ್‌ ಖರೀದಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಪ್ರಮುಖ ವೃತ್ತ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರುವ ಬ್ಯಾನರ್‌ ಹಾಗೂ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಎಲ್ಲರ ಚಿತ್ತ ಕ್ರೀಡಾಂಗಣದತ್ತ ನೆಟ್ಟಿದೆ.

* ಭದ್ರತೆಗೆ 100 ಮಂದಿ ಪೊಲೀಸ್‌ ಸಿಬ್ಬಂದಿ
* 75 ಮಂದಿ ಗೃಹರಕ್ಷಕರ ನಿಯೋಜನೆ
* 500 ಮಂದಿಗೆ ಆಸನ ವ್ಯವಸ್ಥೆ
* 2,500 ವಿದ್ಯಾರ್ಥಿಗಳು ಭಾಗಿ
* 10 ಕೆಎಸ್‌ಆರ್‌ಟಿಸಿ ಬಸ್‌ಗಳ ಬಳಕೆ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !