ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮಿಕ ಆಲೋಚನೆಯಿಂದ ಮನಸ್ಸಿಗೆ ನೆಮ್ಮದಿ

Last Updated 1 ಡಿಸೆಂಬರ್ 2019, 14:52 IST
ಅಕ್ಷರ ಗಾತ್ರ

ಕೋಲಾರ: ‘ಮನುಷ್ಯ ಒತ್ತಡದಲ್ಲಿ ಇದ್ದಾಗ ಆಧ್ಯಾತ್ಮಿಕತೆಯತ್ತ ಆಲೋಚನೆ ಮಾಡಿದರೆ ಮಾನಸಿಕ ನೆಮ್ಮದಿ, ಶಾಂತಿ ಜತೆಗೆ ಧ್ಯಾನದಿಂದ ಉತ್ತಮ ಆರೋಗ್ಯ ಲಭಿಸುತ್ತದೆ’ ಎಂದು ನಾಗಲಾಪುರ ವೀರಸಿಂಹಾಸನ ಸಂಸ್ಥಾನದ ಶ್ರೀತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಮೈಲಾಂಡಹಳ್ಳಿ ಗ್ರಾಮದ ಉಮಾಮಹೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಗಣಹೋಮ ಮತ್ತು ನವಗ್ರಹ ಪೂಜೆ, ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

‘ಪ್ರತಿದಿನ ದೇವರ ದ್ಯಾನ ಪೂಜಾ ಕಾರ್ಯಕ್ರಮದೊಂದಿಗೆ ವೃತ್ತಿ ಬದುಕು ಮುನ್ನಡೆದರೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇತರರೊಂದಿಗೆ ಸುಮಧುರ ಬಾಂಧವ್ಯವೂ ಮುಂದುವರೆಯುತ್ತದೆ’ ಎಂದರು.

‘ಪೂಜೆ, ಧ್ಯಾನ ಮನಸ್ಸಿನ ಕಲ್ಮಶಗಳನ್ನು ಹೋಗಲಾಡಿಸುತ್ತದೆ. ಅಸೂಯೆ, ದ್ವೇಷಕ್ಕೆ ಜಾಗವಿಲ್ಲದಂತೆ ಮಾಡುತ್ತದೆ. ಪ್ರತಿಯೊಬ್ಬರೂ ಆಧ್ಯಾತ್ಮಿಕತೆಯಲ್ಲಿ ತೊಡಗುವುದರಿಂದ ಪರಸ್ಪರ ಸೌಹಾರ್ದತೆಗೂ ಕಾರಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ, ‘ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಳ್ಳಿಯ ಜನಕ್ಕೆ ಹೆಚ್ಚು ಅನುಕೂಲವಾಗಿದೆ’ ಎಂದರು.

‘ಯೋಜನೆಯಿಂದ ಬಡಜನರಿಗೆ, ಕೃಷಿಕರಿಗೆ ಹಾಗೂ ಮಧ್ಯಮವರ್ಗದವರ ಪ್ರಗತಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಾಳಜಿಗೆ ಯಾರೂ ಸಮರಲ್ಲ. ಮಂಜುನಾಥನ ಕೃಪೆಯನ್ನು ಇಡೀ ನಾಡಿಗೆ ಪಸರಿಸಲು ಅವರು ಮಾಡುತ್ತಿರುವ ಸೇವೆ ನಮಗೆ ಆ ಸ್ವಾಮಿಯ ಆಶೀರ್ವಾದ ಎಂದೇ ಭಾವಿಸಬೇಕು’ ಎಂದರು.

ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿ, ‘ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಚಟುವಟಿಕೆಗಳಿಗೆ ಒತ್ತು ನೀಡಿ ಸಮಾಜವನ್ನು ಮುನ್ನಡೆಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ’ ಎಂದು ಹೇಳಿದರು.

‘ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಸುಜ್ಞಾನನಿಧಿ, ಶಿಷ್ಯವೇತನ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ೭೦ಕ್ಕೂ ಹೆಚ್ಚು ನಿರ್ಗತಿಕರಿಗೆ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತಿದ್ದೆ. ಅಂಗವಿಕಲರಿಗೆ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಪಾಲಾಕ್ಷಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ನಂಜುಂಡಪ್ಪ, ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT